

ಚೆನ್ನೈ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಸುಮಾರು ಒಂದೂವರೆ ತಿಂಗಳ ಕಾಲ ಚೆನ್ನೈನ ಎಂಜಿಎಂ ಹೆಲ್ತ್ಕೇರ್ನಲ್ಲಿ ಚಿಕಿತ್ಸೆ ಪಡೆದಿದ್ದು ಎಲ್ಲರಿಗೂ ಗೊತ್ತಿದೆ. ಇಷ್ಟು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಿಕ್ಕೆ ಆದ ಬಿಲ್ ಎಷ್ಟು? ಈ ಕುರಿತು ಇದೀಗ ಚರ್ಚೆ ಪ್ರಾರಂಭವಾಗಿದೆ.
ಎಸ್ಪಿಬಿ ಅವರ ಆಸ್ಪತ್ರೆ ಬಿಲ್ ಮೂರು ಕೋಟಿ ರೂಪಾಯಿಗಳಷ್ಟಾಗಿತ್ತು, ಈ ಪೈಕಿ 1.85 ಕೋಟಿಯಷ್ಟು ಹಣವನ್ನು ಅವರ ಕುಟುಂಬದವರು ಪಾವತಿಸಿದ್ದರು, ಬಾಕಿ ಹಣ ಕುಟುಂಬದವರ ಹತ್ತಿರ ಇರಲಿಲ್ಲವಾದ್ದರಿಂದ ಆಸ್ಪತ್ರೆಯವರು ಪಾರ್ಥಿವ ಶರೀರವನ್ನು ಕೊಡುವುದಕ್ಕೆ ನಿರಾಕರಿಸಿದರು, ತಮಿಳುನಾಡು ಸರ್ಕಾರ ಈ ವಿಷಯದಲ್ಲಿ ಸಹಾಯಕ್ಕೆ ಬರಲಿಲ್ಲವಾದ್ದರಿಂದ ಕೊನೆಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಮಧ್ಯಸ್ಥಿಕೆಯ ನಂತರ ಕುಟುಂಬದವರಿಗೆ ಎಸ್ಪಿಬಿ ಅವರ ಪಾರ್ಥೀವ ಶರೀರವನ್ನು ಒಪ್ಪಿಕೊಂಡರು ಎಂಬಂತಹ ಸುದ್ದಿಗಳು ಕೇಳಿ ಬಂದಿದ್ದವು.
ಇದನ್ನು ಸುಳ್ಳು ಎಂದಿದ್ದ ಎಸ್ಪಿಬಿ ಅವರ ಮಗ ಎಸ್ಪಿಬಿ ಚರಣ್, ಈ ಕುರಿತು ತಾವು ಯಾವುದೇ ವಿಷಯ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ, ಸದ್ಯದಲ್ಲೇ ಆಸ್ಪತ್ರೆಯವರೊಂದಿಗೆ ಪತ್ರಿಕಾಗೋಷ್ಠಿ ಮಾಡಿ, ಎಲ್ಲಾ ವಿಷಯಗಳನ್ನೂ ತಿಳಿಸುವುದಾಗಿ ಹೇಳಿದ್ದರು. ಅದರಂತೆ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ಮಾಡಿ, ಅವರು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.
ಎಸ್ಪಿಬಿ ಅವರ ಚಿಕಿತ್ಸೆಯ ಮೊತ್ತ ಎಷ್ಟಾಗಿದೆ ಎಂಬುದನ್ನು ಹೇಳುವುದಕ್ಕೆ ನಿರಾಕರಿಸಿದ ಅವರು, 'ಅಪ್ಪಾ ಇನ್ಶೂರೆನ್ಸ್ ಮಾಡಿಸಿದ್ದರಿಂದ ಸ್ವಲ್ಪ ಹಣ ಅಲ್ಲಿಂದ ಬರುತಿತ್ತು. ಮಿಕ್ಕಂತೆ, ಪ್ರತೀ ವಾರ ನಾವು ಹಣ ಪಾವತಿಸುತ್ತಾ ಬಂದಿದ್ದೇವೆ. ಅಪ್ಪನ ನಿಧನದ ನಂತರ ಬಾಕಿ ಮೊತ್ತವನ್ನು ಕೊಡುವುದಕ್ಕೆ ಹೋದಾಗ, ಆಸ್ಪತ್ರೆಯವರು ಹಣವನ್ನು ಪಡೆಯುವುದಕ್ಕೆ ನಿರಾಕರಿಸಿದರು. ಇನ್ನೇನು ಪಾವತಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು' ಎಂದು ಹೇಳಿದ್ದಾರೆ.
ಹಣದ ಸಮಸ್ಯೆ ಇರಲಿಲ್ಲ ಎಂದು ಹೇಳಿಕೊಂಡಿರುವ ಅವರು, 'ಹಣದ ಸಮಸ್ಯೆ ಯಾವತ್ತೂ ಆಗಿರಲಿಲ್ಲ. ಅಪ್ಪ ಬೇಗ ಗುಣಮುಖರಾಗಲಿ ಎಂದು ಕಾದೆವು. ಆಸ್ಪತ್ರೆಯವರು ಬಹಳ ಚೆನ್ನಾಗಿ ಅವರನ್ನು ನೋಡಿಕೊಂಡರು. ಇನ್ನು ತಮಿಳು ನಾಡು ಸರ್ಕಾರ ಸಹಾಯಕ್ಕೆ ಬರಲಿಲ್ಲ ಎಂಬುದು ಸುಳ್ಳು. ಏನಾದರೂ ಸಹಾಯದ ಅಗತ್ಯವಿದೆಯೇ ಎಂದು ಸರ್ಕಾರದ ಅಧಿಕಾರಿಗಳು ಆಗಾಗ ಫೋನ್ ಮಾಡುತ್ತಿರುತ್ತಾರೆ ಎಂದು ಆಸ್ಪತ್ರೆಯವರೇ ನನಗೆ ಹೇಳುತ್ತಿದ್ದರು' ಎಂದು ಚರಣ್ ಹೇಳಿಕೊಂಡಿದ್ದಾರೆ.