

ಹೊಸಪೇಟೆ: ಜನಸಾಮಾನ್ಯರಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಾದಂತೆ ಕನ್ನಡ ಸಾಹಿತ್ಯವೂ ಶ್ರೀಮಂತಗೊಳ್ಳಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಬರಹಗಾರರ ಸಂಘದ ತಾಲೂಕು ಘಟಕ, ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ನಗರದ ಜೆ.ಪಿ.ಭವನದಲ್ಲಿ ಶನಿವಾರ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ, ಕವಿಗೋಷ್ಠಿಗಳಿಗಿಂತ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿರುತ್ತದೆ. ಇದು ಈ ಭಾಗದ ಜನರ ಸಾಹಿತ್ಯ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ. ಸಾಹಿತ್ಯಾಸಕ್ತಿಯಿಂದ ಜನರಲ್ಲಿ ಜಾಗೃತ ಪ್ರಜ್ಞೆ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ವಯೋಮಾನದವರು ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಕರೊನಾ ಸಮಯದಲ್ಲಿ ವಾಟ್ಸಾೃಪ್ ಗ್ರೂಪ್‌ನಿಂದ ಹುಟ್ಟಿಕೊಂಡ ಬರಹಗಾರರ ಸಂಘ ಈಗ ವರ್ಷಕ್ಕೆ 3 ರಿಂದ 4 ಸಾವಿರ ಕಥೆ, ಕವನ, ಕಾದಂಬರಿ ಪುಸ್ತಕಗಳು ಪ್ರಕಟಿಸುತ್ತಿದೆ. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದಿದಷ್ಟು ಸುಖ, ಫೇಸ್ ಬುಕ್, ವಾಟ್ಸಾೃಪ್‌ನಲ್ಲಿ ಸಿಗಲ್ಲ. ಅದೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಸವರಾಜ ಮಾತನಾಡಿ, ಹಿಂದೆ ರಾಜರನ್ನು ಮೆಚ್ಚಿಸಲು ಕನ್ನಡ ಸಾಹಿತ್ಯ ಮೀಸಲಾಗಿತ್ತು. ನಂತರ ರನ್ನ, ಪಂಪ, ಹರಿಹರ ಕವಿಗಳಿಂದ ಇನ್ನಷ್ಟು ಶ್ರೀಮಂತಗೊಂಡಿತು. ಬಳಿಕ ವಚನಕಾರರು ಕನ್ನಡ ಸಾಹಿತ್ಯವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದರು. ವಚನ ಸಾಹಿತ್ಯದ ಮೂಲಕ ಜಾತಿ ಪದ್ಧತಿ ವಿನಾಶಗೊಳಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಬಣ್ಣಿಸಿದರು.
ಬರಹಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ವಿರೂಪಾಕ್ಷಪ್ಪ ಪ್ರಾಸ್ತಾವಿಕ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಬಳಿಕ ಹಿರಿಯ ಸಾಹಿತಿ ನೂರ್ ಜಹಾನ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕರವೇ ಜಿಲ್ಲಾಧ್ಯಕ್ಷ ಪಿ.ಷಣ್ಮುಖ, ಚುಸಾಪ ಜಿಲ್ಲಾಧ್ಯಕ್ಷ ಹಾಲ್ಯಾನಾಯ್ಕಾ, ಮ.ಸಾ.ಪ ಜಿಲ್ಲಾಧ್ಯಕ್ಷ ವೆಂಕಟೇಶ ಬಡಿಗೇರ, ಶಿಕ್ಷಕಿ ಮಲ್ಲಿಕಾರ್ಜುನ, ಮೋತಗಿ ಮಲ್ಲಯ್ಯ, ಪ್ರಶಾಂತ, ಶಿಕ್ಷಕ ದಸ್ತಗಿರಿ ನಬಿ, ಶಿಕ್ಷಕ ಟಿ.ವಿಶ್ವನಾಥ ಇದ್ದರು.