ನವದೆಹಲಿ: ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟ ಸಂಭವಿಸಿದ ಪರಿಣಾಮ 25 ಮಂದಿ ಮೃತಪಟ್ಟು, 40 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈಟಿ ದೇಶದಲ್ಲಿ ನಡೆದಿದೆ.
ಮಿರಾಗೋನೆಯಲ್ಲಿ ಈ ಘಟನೆ ಸಂಭವಿಸಿದ್ದು, ಹೈಟಿಯ ಪ್ರಧಾನಿ ಗ್ಯಾರಿ ಕೊನಿಲ್ಲೆ ದುರ್ಘಟನೆಯ ಕುರಿತಂತೆ ಸಂತಾಪ ಸೂಚಿಸಿದ್ದು, ಮೃತರ ಹಾಗೂ ಗಾಯಾಳುಗಳ ಕುಟುಂಬದಗಳಿಗೆ ಅಗತ್ಯೆ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಘಟನೆಯ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ನಗರದ ಪೂರ್ವ ಅಂಚಿನಲ್ಲಿರುವ ಸನ್ಮಾರಿ ಪ್ರದೇಶದಲ್ಲಿ ಮಧ್ಯರಾತ್ರಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ನಂತರ ಕೆಲವರು ರಸ್ತೆಯಲ್ಲಿ ಸುರಿದ ಪೆಟ್ರೋಲ್ ಸಂಗ್ರಹಿಸಲು ಓಡಿದರು. ಈ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 25 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮನೆಗಳು ಸುಟ್ಟು ಕರಕಲಾಗಿದ್ದು, ಬೆಂಕಿ ವೇಗವಾಗಿ ಹರಡಿದ ಪರಿಣಾಮ ಹಲವರು ಸಜೀವ ದಹನವಾಗಿದ್ದಾರೆ ಎಂದು ತಿಳಿಸಿದ್ದಾರೆ.