ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸಮಾಜ ಬದಲಾಯಿಸುವ ಕಾರ್ಯ ಮಾಡಬೇಕಿದ್ದರೆ ವಿದ್ಯಾರ್ಥಿಗಳು ಆಸಕ್ತಿಯುಳ್ಳ ಕ್ಷೇತ್ರವನ್ನೇ ಆಯ್ದುಕೊಳ್ಳಬೇಕು. ಪಾಲಕರೂ ಒತ್ತಡ ಹೇರದೆ ತಮ್ಮ ಮಕ್ಕಳನ್ನು ಅವರಿಚ್ಛೆಯಂತೆ ಮುಂದುವರಿಯಲು ಬಿಡಬೇಕು. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಿದರೆ ಸರ್ವಾಂಗೀಣ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಪತ್ರಕರ್ತ ವಾಲ್ಟರ್ ನಂದಳಿಕೆ ಹೇಳಿದರು.
ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಸಂಸ್ಥೆಯ ಪ್ರವೇಶ ದ್ವಾರದ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿವೇತನ ವಿತರಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಸದಸ್ಯೆ ಸುಜಾತಾ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ, ದಾನಿ ಡಾ.ಪ್ರಭಾ ನಂಬಿಯಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಪ್ರೌಢಶಾಲಾ ಶಿಕ್ಷಕ ಸುಧಾಕರ ಶೆಣೈ, ಎಸ್‌ಡಿಎಂಸಿ ಅಧ್ಯಕ್ಷೆ ಶೋಭಾ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿದರು. ಶುಭಲಕ್ಷ್ಮೀ ನಾಯಕ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಚೈತ್ರಾ ವಂದಿಸಿದರು. ಪವಿತ್ರಾ ಕೆ.ನಿರೂಪಿಸಿದರು.