ಅನ್ಯಾಯದ ವಿರುದ್ಧ ಗಟ್ಟಿಯಾಗಲಿ ಕಾನೂನು ಚೌಕಟ್ಟು : ಡಾ.ಅಕ್ಕೆ ಪದ್ಮಶಾಲಿ ಅಭಿಮತ

New Project (28)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಬಡತನ, ಅಸಮಾನತೆ, ಲಿಂಗತಮ್ಯ, ಮಹಿಳಾ ದೌರ್ಜನ್ಯದಂತಹ ನೂರಾರು ಸಮಸ್ಯೆಗಳು ಇನ್ನೂ ಪರಿಹಾರ ಕಾಣದೆ ಬದಲಾವಣೆ ಅಗೋಚರವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಕಾನೂನು ಚೌಕಟ್ಟು ಇನ್ನಷ್ಟು ಗಟ್ಟಿಗೊಳ್ಳಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಡಾ.ಅಕ್ಕೆ ಪದ್ಮಶಾಲಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ವಿ.ವಿ.ಮಂಗಳಾ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಣಿಪುರದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ನಡುವೆ ನಿರ್ಭಯ, ಸೌಜನ್ಯನಂತಹ ಅನೇಕ ಬಡ ಹೆಣ್ಮಕ್ಕಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಉಡುಪಿಯಲ್ಲಿ ಬೆಸ್ತ ಮಹಿಳೆಯ ಮೇಲಾದ ದೌರ್ಜನ್ಯದಂತಹ ಪ್ರಕರಣಗಳ ನಡುವೆ ಮಹಿಳಾ ದಿನಾಚರಣೆಯನ್ನು ಆಚರಿಸುವುದಾದರೂ ಹೇಗೆನ್ನುವ ದುಃಖ ನಮ್ಮನ್ನು ಕಾಡುತ್ತಿದೆ. ಇವೆಲ್ಲದರ ನಡುವೆ ಮಹಿಳೆಯರು ತಮ್ಮ ಮುಂದಿರುವ ಅವಕಾಶ, ಹಕ್ಕುಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಸಮಾಜಸೇವಕಿ ಗೀತಾ ಆರ್.ಶೆಟ್ಟಿ, ಮೀನುಗಾರಿಕೆ ಕ್ಷೇತ್ರದ ಸಾಧಕಿ ಪ್ರಾಪ್ತಿ ಮೆಂಡನ್, ನಿಖಿಲಾ ಮಂಗಳೂರು ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಾಧ್ಯಾಪಕಿ ಪ್ರೊ.ಸರೋಜಿನಿ ಅವರನ್ನು ಅಭಿನಂದಿಸಲಾಯಿತು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಂಚಾರ ವಿಭಾಗದ ನಜ್ಮಾ ಫಾರೂಕಿ, ಮಂಗಳೂರು ವಿ.ವಿ. ಕುಲಸಚಿವ ರಾಜು ಮೋಗವೀರ ಕೆ. ಮೊದಲಾದವರಿದ್ದರು.

ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಸರೋಜಿನಿ ಸ್ವಾಗತಿಸಿದರು. ಡಾ.ಪ್ರೀತಿ ಕೀರ್ತಿ ಡಿಸೋಜ ನಿರೂಪಿಸಿದರು. ಪ್ರಾಧ್ಯಾಪಕಿ ಪ್ರೊ.ವಿಶಾಲಾಕ್ಷಿ ವಂದಿಸಿದರು.

ಇಂದಿನ ಆಧುನಿಕ ಸಮಾಜದಲ್ಲೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುವಲ್ಲಿ, ತಮ್ಮ ಹಕ್ಕನ್ನು ಪಡೆದುಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದಾರೆ. ಮಹಿಳೆಯರು ತಮ್ಮಲ್ಲಿರುವ ಛಲವನ್ನು ಬಿಡದೆ ಆತ್ಮಸ್ಥೈರ್ಯದೊಂದಿಗೆ ತಮ್ಮ ಹಕ್ಕನ್ನು ಬಳಸಿಕೊಂಡು ಮುನ್ನಡೆಯಬೇಕು. ನಜ್ಮಾ ಫಾರೂಕಿ, ಮಂಗಳೂರು ಸಂಚಾರ ವಿಭಾಗದ ಎ.ಸಿ.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net