ಪ್ರತಿಷ್ಠೆ ಸಂಕೇತವಾಗದಿರಲಿ ದಂಟೆ, ಮುಟ್ಟಾಳೆ : ದೇವು ಮೂಲ್ಯಣ್ಣ ಕಿವಿಮಾತು

New Project (27)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನಮಗೆ ಸಾವಿರ ದೈವಗಳಿದ್ದರೂ ಅವರವರ ಆರಾಧನಾ ಪದ್ಧತಿ ಮಾತ್ರ ವಿಭಿನ್ನ. ದೈವಗಳಿಗೆ ಬೆಳ್ಳಿಯ ಅಣಿ, ಮೊಗ ಸಮರ್ಪಿಸಲು ಭಕ್ತರಿಗೆ ದೈವಗಳೇ ಶಕ್ತಿ ನೀಡಿವೆ. ನಮ್ಮೆಲ್ಲರ ಆರಾಧ್ಯ ದೈವ ಕೊರಗಜ್ಜನಿಗೆ ಭಕ್ತರು ಹರಕೆ ರೂಪದಲ್ಲಿ ನೀಡುವ ಚಿನ್ನದ ದಂಟೆ, ಮುಟ್ಟಾಳೆ ಪ್ರತಿಷ್ಠೆ ಸಂಕೇತವಾಗಬಾರದು ಎಂದು ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಧರ್ಮದರ್ಶಿ ದೇವು ಮೂಲ್ಯಣ್ಣ ಹೇಳಿದರು.

ತೊಕ್ಕೊಟ್ಟು ಸಮೀಪದ ಕೆರೆಬೈಲ್ ಗುಡ್ಡೆಯ ಶ್ರೀ ಕೊರಗತನಿಯ ಸೇವಾ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 48ನೇ ವಾರ್ಷಿಕ ಕೋಲ, ಶ್ರೀ ನಾಗರಕ್ತೇಶ್ವರೀ ಸಾನ್ನಿಧ್ಯ ಪ್ರತಿಷ್ಠಾಪನಾ ಮಹೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ನಡೆಯುವ ಅಗೆಲು ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯರಾದ ವಾರಿಜಾ ಅವರನ್ನು ಸನ್ಮಾನಿಸಲಾಯಿತು. ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಕೈರಂಗಳ ಶಾರದಾ- ಗಣಪತಿ ವಿದ್ಯಾಕೇಂದ್ರ ಸಂಚಾಲಕ ಟಿ.ಜಿ.ರಾಜಾರಾಂ ಭಟ್, ಅಸ್ತ್ರ ಗ್ರೂಪ್ ಸಿಇಒ ಲಾಂಚುಲಾಲ್ ಕೆ.ಎಸ್., ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಾರ್ಯನಿರ್ವಹಣಾಧಿಕಾರಿ ಪ್ರಖ್ಯಾತ್ ರೈ, ಪಂಜಂದಾಯ ಬಂಟ ವೈದ್ಯನಾಥ ಸೇವಾ ಸಮಿತಿ ಕೋಶಾಧಿಕಾರಿ ಸದಾಶಿವ ಶೆಟ್ಟಿ ದೇಲಂತಬೆಟ್ಟು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ತೆರಿಗೆ ಸಲಹೆಗಾರ ತಾರಾನಾಥ ಕಣ್ವತೀರ್ಥ, ಉಳ್ಳಾಲ ಭಾರತೀಯ ತೀಯಾ ಸಮಾಜ ಅಧ್ಯಕ್ಷ ಜಯಂತ್ ಕೊಂಡಾಣ, ಓವರ್ ಬ್ರಿಡ್ಜ್ ಗಣೇಶ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಗಟ್ಟಿ, ದಂತ ವೈದ್ಯೆ ಮೋಕ್ಷಾ ನಾಯಕ್, ಉಳ್ಳಾಲ ನಗರಸಭಾ ಸದಸ್ಯ ರಾಜೇಶ್ ಯು.ಬಿ., ಕೆರೆಬೈಲು ಶ್ರೀ ಕೊರಗತನಿಯ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಮೊದಲಾದವರಿದ್ದರು. ಸಮಿತಿ ಕಾರ್ಯದರ್ಶಿ ಪ್ರದೀಪ್ ಕೆರೆಬೈಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂದೀಪ್ ಕೆರೆಬೈಲು ವರದಿ ವಾಚಿಸಿದರು. ಪುಷ್ಪರಾಜ್ ನಿರೂಪಿಸಿದರು. ಕೋಶಾಧಿಕಾರಿ ರಾಜ ಮೆಸ್ಕಾಂ ವಂದಿಸಿದರು.

ಇಡೀ ಜಗತ್ತು ಪರಸ್ಪರ ವಿಶ್ವಾಸದ ಮೇಲೆ ನಿಂತಿದೆಯಾದರೂ ಜನರ ಮಧ್ಯೆ ಬಾಂಧವ್ಯ ಗಟ್ಟಿಗೊಳ್ಳಲು ವಿಶ್ವಾಸದ ಕೊರತೆ ಎದುರಾಗಿದೆ. ದೈವ- ದೇವರ ಮೇಲೆ ಅಚಲ ವಿಶ್ವಾಸವಿಟ್ಟರೆ ನಮ್ಮ ಕಷ್ಟಗಳು ನೀರಿನಂತೆ ಕರಗುವುದು. ತುಳುನಾಡಿನಲ್ಲಿ ನಡೆಯುವ ದೈವಾರಾಧನೆ, ಧಾರ್ಮಿಕ ಆಚರಣೆ ವಿಶೇಷ ಮಹತ್ವದ್ದಾಗಿದೆ. ಕೇರಳದಂತೆಯೇ ತುಳುನಾಡು ದೈವ-ದೇವರ ಸ್ವಂತ ನಾಡಾಗಿದೆ. ಟಿ.ಜಿ.ರಾಜಾರಾಂ ಭಟ್, ಕೈರಂಗಳ ಶಾರದಾ-ಗಣಪತಿ ವಿದ್ಯಾಕೇಂದ್ರದ ಸಂಚಾಲಕ. ಪ್ರಪಂಚದಾದ್ಯಂತ ಪ್ರಕೃತಿ ವಿಕೋಪ ಸಂಭವಿಸಿದರೂ ನಮ್ಮ ಜಿಲ್ಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಇದಕ್ಕೆ ಜಿಲ್ಲೆಯನ್ನು ದೈವ, ದೇವರು ಕಾಯುತ್ತಿರುವುದು ಕಾರಣ. ದೈವಗಳಿಗೆ ಸಮರ್ಪಣೆ ಮಾಡಿರುವ ಸೊತ್ತು ನಮ್ಮದಲ್ಲವೆಂಬ ಭಾವನೆ ಮನದಲ್ಲಿರಬೇಕು. ಆ ಮೂಲಕ ನಮ್ಮ ಮಣ್ಣಿನ ಕಾರಣೀಕ ದೈವಗಳನ್ನು ಮನಸ್ಸಲ್ಲಿ ಕಾಣಬೇಕು. ದೇವು ಮೂಲ್ಯಣ್ಣ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net