ಕರೊನಾ ಹಾಟ್​ಸ್ಫಾಟ್​ ಆದ ಹೊಂಗಸಂದ್ರ; ಇಂದು 9 ಜನರಲ್ಲಿ ಸೋಂಕು ದೃಢ..ಪೂರ್ತಿ ಏರಿಯಾ ಸೀಲ್​ಡೌನ್​

coronavirus-new
Published on

ಬೆಂಗಳೂರು: ಇಲ್ಲಿನ ಹೊಂಗಸಂದ್ರ ಸದ್ಯ ಕರೊನಾ ಹಾಟ್​ಸ್ಫಾಟ್ ಆಗಿದೆ. ನಿನ್ನೆ ಬಿಹಾರ ಮೂಲದ 54 ವರ್ಷದ ಕಾರ್ಮಿಕನಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಈಗ ಆತನ ಸಂಪರ್ಕದಲ್ಲಿದ್ದ 9 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇವರೆಲ್ಲರೂ ಹೊರರಾಜ್ಯದವರೇ ಆಗಿದ್ದು, ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಒಂದು ಚಿಕ್ಕ ಕೋಣೆಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಈಗ ಇವರ ಸಂಪರ್ಕಕ್ಕೆ ಬಂದವರನ್ನೆಲ್ಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್​ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಕಾರ್ಪೋರೇಟರ್​ ಭಾರತಿ ರಾಮಚಂದ್ರನ್​ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ್ದಾರೆ. ಈ ಕಾರ್ಮಿಕರು ಎಲ್ಲರೂ ಹೊರರಾಜ್ಯದವರೇ ಆಗಿದ್ದಾರೆ. 160 ಮಂದಿ ಕ್ವಾರಂಟೈನ್​​ನಲ್ಲಿ ಇದ್ದರು. ಅವರಿದ್ದ ಕೋಣೆಯಿಂದ ಹೊರಗೆ ಬರುತ್ತಿರಲಿಲ್ಲ. ದಾನಿಗಳೇ ಅವರಿಗೆ ಊಟ ಕೊಡುತ್ತಿದ್ದರು. ಹಾಗಾಗಿ ಕಾರ್ಮಿಕರಿಂದ ಬೇರೆ ಯಾರಿಗಾದರೂ ಸೋಂಕು ತಗುಲಿರುವುದು ಅನುಮಾನ ಎಂದಿದ್ದಾರೆ.

ಅವರ ನೇರ ಸಂಪರ್ಕಕ್ಕೆ ನಾವ್ಯಾರೂ ಹೋಗಿಲ್ಲ. ಇಲ್ಲಿನ ಶಾಸಕರು ಮತ್ತು ನಾನು ಸೇರಿ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಸಂಪೂರ್ಣ ಏರಿಯಾವನ್ನು ಸೀಲ್​ಡೌನ್​ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಬಿಹಾರ ಮೂಲದ 54 ವರ್ಷದ ಕಟ್ಟಡ ಕಾರ್ವಿುಕ ಎದೆನೋವು ಎಂದು ಚಿಕಿತ್ಸೆಗೆ ಹೋಗಿದ್ದ. ಆಸ್ಪತ್ರೆ ವೈದ್ಯ ಡಾ. ವೇಣುಗೋಪಾಲ್, ರೋಗಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಜಯದೇವ ಆಸ್ಪತ್ರೆಗೆ ಕಳುಹಿಸಿದ್ದರು.ಅಲ್ಲಿನ ವೈದ್ಯರು ಪರೀಕ್ಷೆ ನಡೆಸದೆ ವಿಕ್ಟೋರಿಯಾ ಆಸ್ಪತ್ರೆಗೆ ಆಂಬುಲೆನ್ಸ್​ನಲ್ಲಿ ರವಾನಿಸಿದ್ದರು. ಕೋವಿಡ್- 19 ಪರೀಕ್ಷೆ ನಡೆಸಿದಾಗ ಕಾರ್ವಿುಕನಿಗೆ ಸೋಂಕು ದೃಢಪಟ್ಟಿತ್ತು. ಅದಾದ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಆತನ ಸಂಪರ್ಕಕ್ಕೆ ಹೋದವರನ್ನೆಲ್ಲ ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net