ಕರೊನಾ ಎಫೆಕ್ಟ್‌: ಮಾನಸ ಸರೋವರ ಯಾತ್ರೆಯೂ ಇಲ್ಲ, ಗಡಿ ವ್ಯಾಪಾರವೂ ನಡೆಯಲ್ಲ

manasa sarovara
Published on

ಗ್ಯಾಂಗ್‌ಟಾಕ್‌: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ವರ್ಷದ ಕೈಲಾಸ ಮಾನಸಸರೋವರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ಈ ಕುರಿತು ಸಿಕ್ಕಿಂ ಪ್ರವಾಸೋದ್ಯಮ ಸಚಿವ ಬಿ ಎಸ್ ಪಂಥ್‌ ಮಾಹಿತಿ ನೀಡಿದ್ದು, ‘ಈ ಬಾರಿ ಮಾನಸ ಸರೋವರ ಯಾತ್ರೆಯೂ ಇರುವುದಿಲ್ಲ ಹಾಗೂ ನಾಥು ಲಾ ಪಾಸ್‌ (ರಸ್ತೆ) ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರ ಈ ವರ್ಷ ನಡೆಯುವುದಿಲ್ಲ’ ಎಂದಿದ್ದಾರೆ.

ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಾಥು ಲಾ ಪಾಸ್‌ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರ ನಡೆಯುತ್ತದೆ ಜತೆಗೆ ಜೂನ್‌ ತಿಂಗಳಿನಲ್ಲಿ ಕೈಲಾಸ ಮಾನಸರೋವರ ಯಾತ್ರೆ ನಡೆಯುತ್ತದೆ. ವಿದೇಶಾಂಗ ಸಚಿವಾಲಯವು ಪ್ರತಿವರ್ಷ ಜೂನ್‌ನಿಂದ ಸಪ್ಟೆಂಬರ್‌ವರೆಗೆ ಎರಡು ವಿಭಿನ್ನ ಮಾರ್ಗಗಳ ಮೂಲಕ (ಉತ್ತರಾಖಮಡದ ಲಿಪುಲೇಖ್‌ ಪಾಸ್‌ ಮತ್ತು ಸಿಕ್ಕಿಂನ ನಾಥು ಲಾ ಪಾಸ್‌) ಯಾತ್ರೆ ಆಯೋಜಿಸುತ್ತದೆ. ಆದರೆ ಈ ಬಾರಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇವೆಲ್ಲವನ್ನೂ ರದ್ದು ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಈ ಕುರಿತು ಸಿಕ್ಕಿಂ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ ಎಂದು ಪಂಥ್‌ ತಿಳಿಸಿದರು.

ಭಾರತ ಮತ್ತು ಚೀನಾ ನಡುವಿನ ನಾ ಥುಲಾ ಗಡಿ ವ್ಯಾಪಾರವು ಎರಡು ದೇಶಗಳ ನಡುವಿನ ಸಮಸ್ಯೆಯಿಂದಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಕಾಲ ಸ್ಥಗಿತಗೊಂಡಿತ್ತು. ನಂತರ 2006ರಲ್ಲಿ ಇದನ್ನು ಪುನರಾರಂಭಿಸಲಾಗಿದೆ. ಹಾಗೂ ಈ ಪಾಸ್‌ ಮೂಲಕ ಎರಡು ವರ್ಷಗಳಿಂದ ಮಾನಸ ಸರೋವರ ಯಾತ್ರೆ ಕೈಗೊಳ್ಳಲಾಗುತ್ತಿದೆ.

ಕರೋನವೈರಸ್‌ನಿಂದಾಗಿ ಸಿಕ್ಕಿಂ ಪ್ರವಾಸೋದ್ಯಮ ಕ್ಷೇತ್ರಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ರಾಜ್ಯ ಸರ್ಕಾರವು 10 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಕಳೆದುಕೊಂಡಿದೆ ಎಂದು ಸಚಿವರು ಹೇಳಿದರು. (ಏಜನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net