ನಕ್ಸಲಿಸಂ ನಿರ್ಮೂಲನೆ ಮಾಡುವವರೆಗೆ ನಮ್ಮ ಸರ್ಕಾರ ವಿರಮಿಸುವುದಿಲ್ಲ ಎಂದ ಗೃಹ ಸಚಿವ ಅಮಿತ್​ ಷಾ!| Amit Shah

Amit Shah
Published on

Amit Shah: ದೇಶದಲ್ಲಿ ಅಡಗಿರುವ ಎಲ್ಲಾ ನಕ್ಸಲರು ಶರಣಾಗುವವರೆಗೆ, ನಕ್ಸಲಿಸಂ ನಿರ್ಮೂಲನೆ ಮಾಡುವವರೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ರಾಂತಿ ಪಡೆಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬುಧವಾರ (ಸೆಪ್ಟೆಂಬರ್​​ 3) ಹೇಳಿಕೆ ನೀಡಿದ್ದಾರೆ.

ಛತ್ತೀಸ್‌ಗಢದ ಕರ್ರೆಗುಟ್ಟ ಬೆಟ್ಟದಲ್ಲಿ ಆಪರೇಷನ್ ಬ್ಲಾಕ್ ಫಾರೆಸ್ಟ್ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ ಸಿಆರ್‌ಪಿಎಫ್, ಛತ್ತೀಸ್‌ಗಢ ಪೊಲೀಸ್, ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ಕೋಬ್ರಾ ಜವಾನರನ್ನು ಅಭಿನಂದಿಸಿ ಮಾತನಾಡಿದ ಷಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವನ್ನು ನಕ್ಸಲ್ ಮುಕ್ತಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಆಪರೇಷನ್ ಬ್ಲಾಕ್ ಫಾರೆಸ್ಟ್ ಸಮಯದಲ್ಲಿ ನಮ್ಮ ಸೈನಿಕರು ಪ್ರದರ್ಶಿಸಿದ ಶೌರ್ಯ ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ಉಳಿದುಕೊಳ್ಳಲಿದೆ ಎಂದರು. ಪ್ರತಿ ಹಂತದ ಬೆದರಿಕೆಯ ಹೊರತಾಗಿಯೂ, ಭದ್ರತಾ ಪಡೆಗಳು ಹೆಚ್ಚಿನ ನೈತಿಕತೆಯೊಂದಿಗೆ ಕಾರ್ಯಾಚರಣೆಯನ್ನು ನಡೆಸಿ ಪ್ರಮುಖ ನಕ್ಸಲ್ ನೆಲೆ ಶಿಬಿರವನ್ನು ಯಶಸ್ವಿಯಾಗಿ ನಾಶಪಡಿಸಿದವು ಎಂದು ಅವರು ಹೇಳಿದರು.

ಕರ್ರೆಗುಟ್ಟ ಬೆಟ್ಟದಲ್ಲಿ ನಿರ್ಮಿಸಿರುವ ನಕ್ಸಲರ ಸಾಮಗ್ರಿಗಳ ಸಂಗ್ರಹ ಮತ್ತು ಪೂರೈಕೆ ಸರಪಳಿಯನ್ನು ಛತ್ತೀಸ್‌ಗಢ ಪೊಲೀಸ್, ಸಿಆರ್‌ಪಿಎಫ್, ಡಿಆರ್‌ಜಿ ಮತ್ತು ಕೋಬ್ರಾ ಸಿಬ್ಬಂದಿಗಳು ಶೌರ್ಯದಿಂದ ನಾಶಪಡಿಸಿದ್ದಾರೆ, ದೇಶದ ಅಭಿವೃದಿ ಹೊಂದದ ಹಿಂದುಳಿದ ಪ್ರದೇಶಗಳ ಮೇಲೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಶಾಲೆಗಳು, ಆಸ್ಪತ್ರೆಗಳು ಮತ್ತು ಸರ್ಕಾರಿ ಕಲ್ಯಾಣ ಯೋಜನೆಗಳಿಗೆ ಅಡ್ಡಿಪಡಿಸಿದ್ದಾರೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ನಿರಂತರ ನಕ್ಸಲ್ ವಿರೋಧಿ ಕಾರ್ಯಾಚರಣೆಯಿಂದಾಗಿ ಪಶುಪತಿನಾಥದಿಂದ ತಿರುಪತಿವರೆಗಿನ ಪ್ರದೇಶದ 6.5 ಕೋಟಿ ಜನರ ಜೀವನದಲ್ಲಿ ಸೂರ್ಯೋದಯವಾಗಿದ್ದು, ನಕ್ಸಲಿಸಂ ನಿರ್ಮೂಲನೆ ಮಾಡುವ ಕಾರ್ಯಚರಣೆ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಮೋದಿ ಸರ್ಕಾರ ಎಲ್ಲಾ ರೀತಿಯ ಅಗತ್ಯ ನೆರವುಗಳನ್ನು ನೀಡುತ್ತದೆ ಎಂದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net