CAA cut-off | ಪೌರತ್ವ ತಿದ್ದುಪಡಿ ಕಾಯ್ದೆ; ಮುಸ್ಲಿಂ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದ ಅಲ್ಪಸಂಖ್ಯಾತರಿಗೆ ಕೇಂದ್ರ ಸರ್ಕಾರದಿಂದ ಗುಡ್​ ನ್ಯೂಸ್​​!

CAA
Published on

CAA cut-off: ಧಾರ್ಮಿಕ ಕಿರುಕುಳದಿಂದ ಪಾರಾಗಲು 2024 ಡಿಸೆಂಬರ್ 31 ರವರೆಗೆ ಭಾರತಕ್ಕೆ ಬಂದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಪಾಸ್‌ಪೋರ್ಟ್ ಸೇರಿದಂತೆ ಇತರ ಯಾವುದೇ ಪ್ರಯಾಣ ದಾಖಲೆಗಳಿಲ್ಲದೆ ದೇಶದಲ್ಲಿ ಉಳಿದುಕೊಳ್ಳಲು ಕೇಂದ್ರ ಗೃಹ ಸಚಿವಾಲಯ ಅವಕಾಶ ನೀಡುವುದಾಗಿ ತಿಳಿಸಿದೆ.

2025 ರ ವಲಸೆ ಮತ್ತು ವಿದೇಶಿಯರ ಕಾಯ್ದೆಯಡಿಯಲ್ಲಿ ಹೊರಡಿಸಲಾದ ಈ ಮಹತ್ವದ ಆದೇಶವು, 2014 ರ ನಂತರ ಭಾರತಕ್ಕೆ ಬಂದು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಪಾಕಿಸ್ತಾನದ ಹಿಂದೂಗಳಿಗೆ, ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಜನರಿಗೆ ಪರಿಹಾರವನ್ನು ನೀಡುತ್ತದೆ.

ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಧಾರ್ಮಿಕ ಕಿರುಕುಳದ ಭಯದಿಂದಾಗಿ ಭಾರತದಲ್ಲಿ ಆಶ್ರಯ ಪಡೆದಿದ್ದರು. ಕೇಂದ್ರ ಶಿಕ್ಷಣ ರಾಜ್ಯ ಸಚಿವೆ ಸುಕಾಂತ ಮಜುಂದಾರ್ ಸೆಪ್ಟೆಂಬರ್ 1 ರ ಅಧಿಸೂಚನೆಯನ್ನು ಹಂಚಿಕೊಂಡಿದ್ದು, ಈ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾಗೆ ಧನ್ಯವಾಧಗಳನ್ನು ತಿಳಿಸಿದ್ದಾರೆ.

ಈ ದಿನಾಂಕ ವಿಸ್ತರಣೆಗೂ ಮುನ್ನ, 2014 ಡಿಸೆಂಬರ್ 31 ರ ಮೊದಲು ಭಾರತಕ್ಕೆ ಪ್ರವೇಶಿಸಿದ ನಿರಾಶ್ರಿತರಿಗೆ ಸಿಎಎ ಅನ್ವಯವಾಗುತ್ತದೆ ಎನ್ನಲಾಗಿತ್ತು. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಡಿಸೆಂಬರ್ 2019 ರಲ್ಲಿ ಸಂಸತ್ತು ಅಂಗೀಕರಿಸಿತು. ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಮಸೂದೆಗೆ ಸಹಿ ಹಾಕಿದರು ಮತ್ತು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸಿದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಸಲುವಾಗಿ ಈ ಕಾನೂನು ಜಾರಿಗೆ ಬಂದಿತ್ತು. ಭಾರತಕ್ಕೆ ಬಂದಿರುವ ವ್ಯಕ್ತಿಗಳ ದೀರ್ಘಕಾಲದ ಮನವಿಯ ನಂತರ ಈ ಅವಧಿ ವಿಸ್ತರಣೆಯಾಗಿದ್ದು, ಬಾಂಗ್ಲಾದೇಶವನ್ನು ಪ್ರತಿನಿಧಿಸುವ ನಿರಾಶ್ರಿತರ ಸಂಘಟನೆಯು ಗಡಿಯುದ್ದಕ್ಕೂ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರ ಒಳಹರಿವು ನಿರಂತರವಾಗಿ ನಡೆಯುತ್ತಿರುವುದನ್ನು ಉಲ್ಲೇಖಿಸಿ 2014 ರಿಂದ 2024 ರವರೆಗೆ CAA ಕಟ್-ಆಫ್ ದಿನಾಂಕವನ್ನು ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿತ್ತು ಎನ್ನಲಾಗಿದೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net