ಮನೆಯಲ್ಲಿ ಹೆಚ್ಚಾದ ಊಟದ ವೆಚ್ಚ! ವೆಜ್​ಗೆ ಹೋಲಿಸಿದರೆ ನಾನ್​ವೆಜ್​ ಕಡಿಮೆ, ಕಾರಣ ಹೀಗಿದೆ…

Veg and Non Veg
Published on

ನವದೆಹಲಿ: ಟೊಮ್ಯಾಟೋ ಮತ್ತು ಈರುಳ್ಳಿ ಬೆಲೆ ಏರಿಕೆಯು ಊಟದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ಅಂದರೆ ಕಳೆದ ನವೆಂಬರ್​ ತಿಂಗಳಲ್ಲಿ ಮನೆಯಲ್ಲಿ ತಯಾರಿಸಿದ ಸಸ್ಯಹಾರ ಮತ್ತು ಮಾಂಸಾಹಾರ ಊಟದ ಬೆಲೆಯಲ್ಲಿ ಕ್ರಮವಾಗಿ 10 ಮತ್ತು 5 ರಷ್ಟು ಏರಿಕೆ ಕಂಡಿದೆ ಎಂದು ಸಿಆರ್​ಐಎಸ್​ಐಎಲ್ (ಕ್ರಿಸಿಲ್‌)​ ಮಾರ್ಕೆಟ್ ಇಂಟೆಲಿಜೆನ್ಸ್ & ಅನಾಲಿಟಿಕ್ಸ್ ಸಂಶೋಧನೆ ಅಂದಾಜು ಮಾಡಿದೆ.

ಕ್ರಿಸಿಲ್‌ ಪ್ರಕಾರ ಒಂದು ಪ್ಲೇಟ್ ಆಹಾರದ ವೆಚ್ಚ ವಿಶ್ಲೇಷಣೆಯ ಪ್ರಕಾರ ಮನೆಯಲ್ಲಿ ತಯಾರಿಸಿದ ವೆಜ್​ ಮತ್ತು ನಾನ್​ವೆಜ್​ ದುಬಾರಿಯಾಗಿದೆ. ಹಬ್ಬದ ಬೇಡಿಕೆ ಮತ್ತು ಅನಿರೀಕ್ಷಿತ ಮಳೆಯಿಂದಾಗಿ ಖಾರಿಫ್ ಋತುವಿನಲ್ಲಿ ಉತ್ಪಾದನೆ ಕುಂಠಿತವಾದ ಪರಿಣಾಮ ನವೆಂಬರ್​ ತಿಂಗಳಲ್ಲಿ ಈರುಳ್ಳಿ ಬೆಲೆಯಲ್ಲಿ 58% ಮತ್ತು ಟೊಮ್ಯಾಟೋ ಬೆಲೆಯಲ್ಲಿ ಶೇ. 35 ರಷ್ಟು ಏರಿಕೆ ಕಂಡಿತು. ಸಹಜವಾಗಿಯೇ ಊಟದ ವೆಚ್ಚದಲ್ಲೂ ಪ್ರಭಾವ ಬೀರಿದ್ದು, ಭಾರಿ ಬೆಲೆ ಏರಿಕೆ ಕಂಡಿದೆ ಎಂದು ಕ್ರಿಸಿಲ್​ ಸಂಸ್ಥೆ ತಿಳಿಸಿದೆ.

ಅಚ್ಚರಿಯೇನೆಂದರೆ, ವೆಜ್​ ಊಟದ ವೆಚ್ಚಕ್ಕೆ ಹೋಲಿಕೆ ಮಾಡಿದರೆ, ನಾನ್​ವೆಜ್ ಊಟದ ವೆಚ್ಚ ನಿಧಾನ ಗತಿಯಲ್ಲಿದೆ. ಇದಕ್ಕೆ ಕಾರಣ ಬ್ರಾಯ್ಲರ್​ ಕೋಳಿ ಮಾಂಸದ ದರದಲ್ಲಿ 1 ರಿಂದ 3 ರಷ್ಟು ಕಡಿಮೆಯಾಗಿದ್ದು. ಮಾಂಸಹಾರ ಊಟದ ವೆಚ್ಚದ ಶೇ. 50 ಅನ್ನು ಮಾಂಸವೇ ಹೊಂದಿದೆ. ಆದರೆ, ನವೆಂಬರ್​ ತಿಂಗಳಲ್ಲಿ ಬೆಲೆ ಕಡಿಮೆ ಇದ್ದಿದ್ದರಿಂದ ವೆಜ್​ಗೆ ಹೋಲಿಕೆ ಮಾಡಿದರೆ ನಾನ್​ವೆಜ್​ ಊಟದ ವೆಚ್ಚ ಏರಿಕೆಯಾಗಿಲ್ಲ.

ವರ್ಷದಿಂದ ವರ್ಷಕ್ಕೆ ವೆಜ್​ ಊಟದ ವೆಚ್ಚವು 9% ರಷ್ಟು ಹೆಚ್ಚಾಗುತ್ತಿದೆ. ಮುಖ್ಯವಾಗಿ ಬೇಕಾದ ಈರುಳ್ಳಿ ಮತ್ತು ಟೊಮ್ಯಾಟೋ ಬೆಲೆಗಳಲ್ಲಿ ಕ್ರಮವಾಗಿ 93% ಮತ್ತು 15% ಏರಿಕೆಯಾಗಿದೆ. ಅಲ್ಲದೆ, ಸಸ್ಯಾಹಾರಿ ಊಟದ ವೆಚ್ಚದ ಸುಮಾರು 9% ರಷ್ಟಿರುವ ಬೇಳೆಕಾಳುಗಳ ಬೆಲೆಗಳು ಸಹ 21% ರಷ್ಟು ಏರಿಕೆಯಾಗಿದ್ದು, ವೆಜ್​ ಊಟ ದುಬಾರಿಯಾಗಲು ಕಾರಣವಾಗಿದೆ.

ವೆಜೆಟೇರಿಯನ್​ ಊಟವು ರೋಟಿ, ತರಕಾರಿಗಳು (ಈರುಳ್ಳಿ, ಟೊಮ್ಯಾಟೋ ಮತ್ತು ಆಲೂಗೆಡ್ಡೆ), ಅನ್ನ, ದಾಲ್​, ಮೊಸರು ಮತ್ತು ಸಲಾಡ್​ ಒಳಗೊಂಡಿದೆ. ಅದೇ ರೀತಿ ನಾನ್​ ವೆಜಿಟೇರಿಯನ್​ ಕೂಡ ಒಂದೇ ರೀತಿಯ ಆಹಾರ ಪದಾರ್ಥಗಳನ್ನು ಹೊಂದಿದೆ. ಆದರೆ, ದಾಲ್​ ಬದಲಿಗೆ ಚಿಕನ್​ ಬಳಸಲಾಗುತ್ತದೆ. ಊಟದ ವೆಚ್ಚದ ಅಂದಾಜುಗಳನ್ನು ಭಾರತದ ವಿವಿಧ ಪ್ರದೇಶಗಳಲ್ಲಿನ ಬೆಲೆಗಳನ್ನು ಆಧರಿಸಿ, CRISIL ಅಂದಾಜು ಮಾಡಿದೆ.

ಬೇಳೆಕಾಳುಗಳು, ಬ್ರಾಯ್ಲರ್​ಗಳು, ತರಕಾರಿಗಳು, ಮಸಾಲೆಗಳು, ಖಾದ್ಯ ತೈಲ ಮತ್ತು ಅಡುಗೆ ಅನಿಲಗಳ ಬೆಲೆಗಳಲ್ಲಿನ ಏರಿಳಿತಗಳು ಗ್ರಾಹಕರ ಖರ್ಚಿನ ಮೇಲೆ ಪ್ರಭಾವ ಬೀರುತ್ತದೆ. ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 15 ತಿಂಗಳ ಗರಿಷ್ಠ 7.44% ಕ್ಕೆ ಏರಿತು. ಮುಖ್ಯವಾಗಿ ಆಹಾರ ಬೆಲೆ ಹಣದುಬ್ಬರವು 11.5% ತಲುಪಿದೆ. ಕಳೆದ ಮೂರುವರೆ ವರ್ಷಗಳಲ್ಲಿ ಆಹಾರ ಬೆಲೆ ಹಣದುಬ್ಬರದ ಗರಿಷ್ಠ ಮಟ್ಟ ಇದಾಗಿದೆ. ಹೆಚ್ಚುವರಿಯಾಗಿ ಆಹಾರ ಹಣದುಬ್ಬರವನ್ನು ತಡೆಯುವ ಗುರಿಯನ್ನು ಹೊಂದಿರುವ ರಫ್ತು ಮೇಲಿನ ನಿರ್ಬಂಧಗಳು ಮತ್ತು ಬೇಳೆಕಾಳು ಆಮದುಗಳಂತಹ ಸರ್ಕಾರದ ಕ್ರಮಗಳ ಹೊರತಾಗಿಯೂ ಹಣದುಬ್ಬರದ ಅಂಕಿ-ಅಂಶವು ಅಕ್ಟೋಬರ್‌ನಲ್ಲಿ 6.61% ಕ್ಕೆ ಏರಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net