More

    ಮಾಧ್ಯಮಗಳಲ್ಲಿ ಕಡಿಮೆಯಾಗುತ್ತಿರುವ ಸತ್ವ: ಎಚ್.ಎಂ. ರೇವಣ್ಣ ಬೇಸರ

    ಬೆಂಗಳೂರು: ಇತ್ತೀಚಿನ ಪತ್ರಿಕೋದ್ಯಮದಲ್ಲಿ ಸತ್ವ (ತಿರುಳು) ಕಡಿಮೆಯಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಪ್ರದೇಶ ಕುರುಬರ ಸಂಘ ಮತ್ತು ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ ವತಿಯಿಂದ ಗುರುವಾರ ಗಾಂಧಿನಗರದ ಕನಕ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘‘ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮತ್ತು ವಿಜಯವಾಣಿಯ ಸಹಾಯಕ ಸಂಪಾದಕ ಹಾಗೂ ಪ್ರೆಸ್ ಕೌನ್ಸಿಲ್ ಆಫ್​ ಇಂಡಿಯಾದ ಪ್ರಶಸ್ತಿ ಪುರಸ್ಕೃತ ರುದ್ರಣ್ಣ ಹರ್ತಿಕೋಟಿ’’ ಅವರಿಗೆ ಅಭಿನಂದಿಸಿ ಮಾತನಾಡಿದರು.

    ತಂತ್ರಜ್ಞಾನದಿಂದ ಮಾಧ್ಯಮ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗಿವೆ. ಬರವಣಿಗೆಗಿಂತ ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳು ಹೆಚ್ಚಾಗಿದೆ. ವಾಟ್ಸ್‌ಆ್ಯಪ್‌ಗಳು ದಿಕ್ಕುತಪ್ಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಪತ್ರಿಕೆ ಅಥವಾ ಮಾಧ್ಯಮಗಳಲ್ಲಿ ಸತ್ವ ಇದ್ದರೆ ಮಾತ್ರ ಜನ ಹೆಚ್ಚಾಗಿ ಓದುತ್ತಾರೆ ಅಥವಾ ನೋಡುತ್ತಾರೆ. ಹೀಗಾಗಿ ಮಾಧ್ಯಮದವರು ಸತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹಿಂದೆಲ್ಲ ನಾವು ಪತ್ರಿಕೆ ಓದುವಾಗ ಅದರಲ್ಲಿ ಗಂಭೀರವಾದ ವಿಷಯಗಳ ಸತ್ವ ಇರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಸತ್ವ ಕಡಿಮೆಯಾಗುತ್ತಿದೆ ಎಂಬುದು ನನ್ನ ಭಾವನೆಯಾಗಿದೆ ಎಂದಿದ್ದಾರೆ.

    ರಾಜಕಾರಣಿಗಳು ಮಾಧ್ಯಮಗಳಲ್ಲಿ ಬರುವ ವಿಷಯದ ಮೇಲೆಯೇ ಹೆಚ್ಚಿನ ಚರ್ಚೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಅಂಕಣಗಳು, ವಿಶೇಷ ವರದಿಗಳು ಕಡಿಮೆಯಾಗುತ್ತಿದೆ ಎಂಬುದು ನನ್ನ ಅನಿಸಿಕೆ. ಯಾರು ಒಪ್ಪಲಿ, ಬೀಡಲಿ ಇಂದು ಸಣ್ಣ ಪತ್ರಿಕೆಗಳು ಮಾತ್ರವಲ್ಲ ದೊಡ್ಡ ಪತ್ರಿಕೆಗಳು ಮಾಲೀಕರ ಸೊತ್ತಾಗಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಕ್ಷೇತ್ರ ಬಹಳ ಮುಖ್ಯವಾದದ್ದು, ಇದಕ್ಕೆ ಒತ್ತು ನೀಡುವಂತಹ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಮತ್ತು ಈಗಲು ಅನೇಕ ಯೋಜನೆಗಳನ್ನು ಮಾಧ್ಯಮ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಮುಂದೆಯು ಕೊಡಲಿದ್ದಾರೆ ಎಂದು ಹೇಳಿದ್ದಾರೆ.

    Felication (1)

    ಸಮಸ್ಯೆಗಳ ಬಗ್ಗೆ ಅರಿವಿದೆ: ಕೆ.ವಿ. ಪ್ರಭಾಕರ್​

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ವಿ.ಪ್ರಭಾಕರ್, ಸಾಕಷ್ಟು ಹಿರಿಯರ ಮಧ್ಯೆ ಕಿರಿಯನಾಗಿ ನಾನು ಈ ಅಭಿನಂದನೆ ಸ್ವೀಕರಿಸಿದ್ದೇನೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಈ ಅಭಿನಂದನೆ ಸ್ವೀಕರಿಸಲು ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

    ಇದನ್ನೂ ಓದಿ: ಮೇಕೆದಾಟು ಯೋಜನೆ ಕುರಿತು ಆಕ್ರಮಣಕಾರಿ ವರ್ತನೆ ಬಿಡಿ; ಡಿಕೆಶಿಗೆ ತಮಿಳುನಾಡು ಸಚಿವ ಕಿವಿಮಾತು

    ಸಣ್ಣ ಪತ್ರಿಕೆಯಿಂದ ನನ್ನ ಪತ್ರಿಕೋದ್ಯಮ ಜೀವನ ಆರಂಭವಾಯಿತು. 23 ವರ್ಷಗಳ ಹಿಂದೆ ನಾನು ಒಬ್ಬ ಸಾಮಾನ್ಯ ಪತ್ರಕರ್ತನಾಗಿ ಬೆಂಗಳೂರಿಗೆ ಬಂದೆ. 2003ರಲ್ಲಿ ಸಿದ್ದರಾಮಯ್ಯ ಅವರಿಗೆ ನನ್ನ ಮದುವೆಗೆ ಆಹ್ವಾನ ಪತ್ರಿಕೆ ನೀಡಲು ಬಿ.ಕೆ.ರವಿ ಸರ್ ಅವರ ಸಹಾಯ ಪಡೆದು ಹೋಗಿದ್ದೆ. ಆದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಕೆಲಸ ಮಾಡುವ ಸೌಭಾಗ್ಯ ನನ್ನದಾಗಿದೆ.

    ಇದನ್ನು ನಾನು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ.2013ರಲ್ಲಿ ನಾನು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕನಾಗಿ ಬಂದಾಗ ಎಚ್.ಎಂ.ರೇವಣ್ಣ ಅವರು, ನೀನು ಸಿಎಂ ಜತೆ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಮರೆತು, ಒಬ್ಬ ಪತ್ರಕರ್ತ ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡು ಯಾರೇ ಬಂದರು ಸಹಾಯ ಮಾಡುವ ಗುಣ ಬೆಳೆಸಿಕೊ ಎಂದು ಕಿವಿಮಾತು ಹೇಳಿದ್ದರು. ನಾನು ಅವರು ನೀಡಿದ ಸಲಹೆಯನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದೇನೆ. ನಾನು ಸದಾ ಪತ್ರಕರ್ತನಾಗಿಯೇ ಇರುತ್ತೇನೆ. ಪತ್ರಕರ್ತರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ವಿಧಾನಸೌಧ 2ನೇ ಮಹಡಿಯಲ್ಲಿ ನನ್ನ ಕಚೇರಿ ಇದೆ. ಪತ್ರಕರ್ತ ಮಿತ್ರರಿಗೆ ಅದರ ಭಾಗಿಲು ಸದಾ ತೆರೆದಿರುತ್ತದೆ. ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು ಎಂದು ಕೆ.ವಿ. ಪ್ರಭಾಕರ್​ ಹೇಳಿದ್ದಾರೆ.

    Felication (2)

    ನಿಯಮ ಸರಳೀಕರಣಗೊಳಿಸಿ: ರುದ್ರಣ್ಣ ಮನವಿ

    ವಿಜಯವಾಣಿ ಸಹ ಸಂಪಾದಕರಾದ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಪತ್ರಕರ್ತರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಈ ಹಿಂದೆ ಪತ್ರಕರ್ತರಿಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದರು. ಅದಕ್ಕೆ ಅಧಿಕಾರಿಗಳು ಕೆಲವೊಂದಿಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರ ಪರಿಣಾಮ ಅದನ್ನು ಹೆಚ್ಚು ಜನರು ಪಡೆದುಕೊಳ್ಳಲು ಆಗಲಿಲ್ಲ. ಹೀಗಾಗಿ ಆ ನಿಯಮಗಳನ್ನು ಸರಳೀಕರಣಗೊಳಿಸಬೇಕು ಮತ್ತು ಪಿಂಚಣಿ ಮೊತ್ತವನ್ನು ಹೆಚ್ಚಿಗೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಪತ್ರಕರ್ತರು ಸೇವಾ ಭದ್ರತೆ ಮತ್ತು ಸೌಲಭ್ಯಗಳಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮಕ್ಷೇತ್ರ ಒಂದು ರೀತಿ ಅಸಂಘಟಿತ ಕ್ಷೇತ್ರ ಎನ್ನಬಹುದು. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗಲು ವಾರ್ತಾ ಇಲಾಖೆ ಮತ್ತು ಮಾಧ್ಯಮ ಅಕಾಡೆಮಿ ಮೂಲಕ ಈ ಬಾರಿಯ ಬಜೆಟ್‌ನಲ್ಲಿ ಹೊಸ ಕಾರ್ಯಕ್ರಮ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಈ ಅಂಶಗಳಿದ್ದು, ಅದನ್ನು ಅನುಷ್ಠಾನಕ್ಕೆ ತಂದರೆ ತುಂಬಾ ಜನ ಪತ್ರಕರ್ತರಿಗೆ ಅನುಕೂಲವಾಗುತ್ತದೆ. ಸಣ್ಣ ಪತ್ರಿಕೆಗಳ ನೆರವಿನ ಪ್ರಮಾಣದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಮಾಧ್ಯಮ ಪ್ರತಿನಿಧಿಯಾಗಿ ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಪ್ರಭಾಕರ್ ಅವರು ಸರ್ಕಾರದ ಭಾಗವಾಗಿದ್ದು ನಮ್ಮೆಲ್ಲರ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

    ಕಾರ್ಯಕ್ರಮದಲ್ಲಿ ಕೊಪ್ಪಳ ವಿ.ವಿ ಕುಲಪತಿ ಬಿ.ಕೆ.ರವಿ, ಹಿಂದುಳಿದ ವರ್ಗಗಳ ಆಯೋಜದ ಮಾಜಿ ಅಧ್ಯಕ್ಷ ಕಾಂತರಾಜು, ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ್ ತಗಡೂರು, ಹಿರಿಯ ಪತ್ರಕರ್ತರಾದ ಸಿದ್ದರಾಜು, ನಾಗಣ್ಣ, ಗಂಗಾಧರ್ ಮೊದಲಿಯಾರ್, ಗಿರೀಶ್ ಕೋಟೆ, ಮಾಜಿ ಮೇಯರ್‌ಗಳಾದ ವೆಂಕಟೇಶ್ ಮೂರ್ತಿ, ರಾಮಚಂದ್ರಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಪ್ರಸಾದ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts