ಹಿಟ್ ಆ್ಯಂಡ್ ರನ್​​ ಪ್ರಕರಣ; ಶಿವಸೇನೆಯ ಉಪನಾಯಕನ ಸ್ಥಾನದಿಂದ ಆರೋಪಿ ತಂದೆ ರಾಜೇಶ್​ ಷಾ ವಜಾ

Untitled-design-2024-07-10T142418.742
Published on

ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣದ ಆರೋಪಿಯ ತಂದೆ ರಾಜೇಶ್ ಷಾ ವಿರುದ್ಧ ಶಿವಸೇನೆ (ಶಿಂಧೆ ಬಣ) ಕ್ರಮಕೈಗೊಂಡಿದೆ. ಏಕನಾಥ್ ಶಿಂಧೆ ಅವರ ಶಿವಸೇನೆಯು ರಾಜೇಶ್ ಷಾ ಅವರನ್ನು ಪಕ್ಷದ ಹುದ್ದೆಯಿಂದ ತೆಗೆದುಹಾಕಿದೆ. ಶಿಂಧೆ ಬಣದ ಶಿವಸೇನೆಯಲ್ಲಿ ಉಪನಾಯಕರಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಷಾ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಆರೋಪಿ ಮಿಹಿರ್ ತಂದೆ ರಾಜೇಶ್ ಷಾ ಪಾಲ್ಘರ್ ಜಿಲ್ಲೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಅಧಿಕಾರಿಯಾಗಿದ್ದಾರೆ.

ರಾಜೇಶ್ ಅವರನ್ನು ಮುಂಬೈ ಪೊಲೀಸರು ಆತನ ಚಾಲಕ ರಾಜಋಷಿ ಬಿಡಾವತ್ ಜತೆಗೆ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಬಂಧಿಸಿದ್ದರು. ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್ ಸೋಮವಾರ ರಾಜೇಶ್‌ಗೆ ಜಾಮೀನು ಮಂಜೂರು ಮಾಡಿತು. ಮುಂಬೈ ಸಮೀಪದಿಂದ ಮಂಗಳವಾರ ಮಿಹರ್​​ ಷಾನನ್ನು ಪೊಲೀಸರು ಬಂಧಿಸಿದ್ದಾರೆ. ಮಿಹಿರ್ ಷಾ ಅವರ ತಂದೆ ರಾಜೇಶ್ ಷಾ ಅವರು ತಮ್ಮ ಮಗ ಪರಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು ಮತ್ತು ಅವರು ಚಲಾಯಿಸುತ್ತಿದ್ದ BMW ಕಾರನ್ನು ಸ್ಥಳದಿಂದ ತೆಗೆದುಹಾಕಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವರ್ಲಿ ಪ್ರದೇಶದ ಏಟ್ರಿಯಾ ಮಾಲ್ ಬಳಿ ಭಾನುವಾರ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ನಂತರ ಆರೋಪಿಗಳು ಕಾರನ್ನು ನಿಲ್ಲಿಸದ ಕಾರಣ ಮಹಿಳೆಯೊಬ್ಬರ ಮೃತಪಟ್ಟರು. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ಪ್ರದೀಪ್ ನಖ್ವಾ, ಆರೋಪಿ ತಮ್ಮ ನಾಯಕನ ಮಗನಾಗಿರುವುದರಿಂದ ಶಿವಸೇನೆ ಏನೂ ಮಾಡುವುದಿಲ್ಲ ಎಂದು ಆರೋಪಿಸಿದ್ದರು.

ಅಲ್ಲದೆ ಶಿವಸೇನಾ (ಯುಬಿಟಿ) ನಾಯಕ ಮತ್ತು ಸಂಸದ ಸಂಜಯ್ ರಾವುತ್ ಅವರು ವರ್ಲಿ ಹಿಟ್ ಆ್ಯಂಡ್ ರನ್ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ಮೊದಲ ದಿನದಿಂದ ಪ್ರಾರಂಭವಾಗಿವೆ ಎಂದು ಆರೋಪಿಸಿದ್ದರು. ಈಗ ಶಿಂಧೆ ಬಣದ ಶಿವಸೇನೆಯು ರಾಜೇಶ್ ಷಾನನ್ನು ಅವರ ಸ್ಥಾನದಿಂದ ತೆಗೆದುಹಾಕಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net