ಗಾಂಧಿ ಹತ್ಯೆ ಸಂಭ್ರಮಿಸಿದ್ದ ಹಿಂದು ಮಹಾಸಭಾದ ನಾಯಕಿ; ಅಕ್ರಮ ಸಂಬಂಧಕ್ಕೆ ಉದ್ಯಮಿಯ ಕಥೆಯನ್ನೇ ಮುಗಿಸಿದಳು... Murder

Untitled design - 2025-10-03T094804.235
Published on

Murder: 2019ರಲ್ಲಿ ಮಹಾತ್ಮ ಗಾಂಧಿ ಪೋಸ್ಟರ್​ಗೆ ನಕಲಿ ಗುಂಡು ಹಾರಿಸಿ ಹತ್ಯೆಯನ್ನು ಸಂಭ್ರಮಿಸಿದ್ದ ಹಿಂದು ಮಹಾಸಭಾದ ನಾಯಕಿ ಪೂಜಾ ಶಕುನ್ ಪಾಂಡೆ, ಟಿವಿಎಸ್ ಶೋ ರೂಮ್​ ಮಾಲೀಕರೊಬ್ಬರನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಶುಕ್ರವಾರ(ಅ. 03) ವರದಿಯಾಗಿದೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ಸೆ. 23ರಂದು ರಾತ್ರಿ 9.30ರ ಸುಮಾರಿಗೆ ಖೇರೇಶ್ವರ ಛೇದಕದಲ್ಲಿ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಟಿವಿಎಸ್ ಶೋ ರೂಂ ಮಾಲೀಕ ಅಭಿಷೇಕ್ ಗುಪ್ತಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಅಪರಾಧ ಕೃತ್ಯವನ್ನು ಬೇಧಿಸಿದ್ದಾರೆ. ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಗುಂಡಿನ ದಾಳಿ ಪ್ರಕರಣದಲ್ಲಿ ಪ್ರಮುಖ ವಿಷಯವನ್ನು ಬಹಿರಂಗಪಡಿಸಿರುವ ಪೊಲೀಸರು, ಈ ಕೊಲೆಗೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮತ್ತು ಅವರ ಪತಿ ಅಶೋಕ್ ಪಾಂಡೆ ಸಂಚು ರೂಪಿಸಿದ್ದರು. ಉದ್ಯಮಿಯನ್ನು ಕೊಲ್ಲಲು ದಂಪತಿ 3 ಲಕ್ಷ ರೂ.ಗಳಿಗೆ ಸುಪಾರಿ ನೀಡಿದ್ದರು ಎಂದು ತಿಳಿಸಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಅಭಿಷೇಕ್ ಗುಪ್ತಾ ಮತ್ತು ಪೂಜಾ ಶಕುನ್ ಪಾಂಡೆ ಆಪ್ತರಾಗಿದ್ದು, ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎಂದು ತಿಳಿದು ಬಂದಿದೆ. ಸುಮಾರು 20 ದಿನಗಳ ಹಿಂದೆ ಕೊಲೆಯಾದ ಅಭಿಷೇಕ್ ಗುಪ್ತಾ, ಪೂಜಾಳಿಂದ ಅಂತರ ಕಾಯ್ದುಕೊಂಡಿದ್ದು, ನಂಬರ್ ಬ್ಲಾಕ್ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ ದ್ವೇಷದಿಂದ ಪತಿ ಮತ್ತು ಪತ್ನಿ ದ್ವೇಷದಿಂದ ಸುಪಾರಿ ನೀಡಿ ಕೊಲೆಗೈಯ್ಯಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಎಸ್ಎಸ್​ಪಿ, ಉದ್ಯಮಿ ಅಭಿಷೇಕ್ ಕೊಲೆ ಮಾಡಲು ಶೂಟರ್ ಫಜಲ್‌ಗೆ 3 ಲಕ್ಷ ರೂ.ಗಳ ಗುತ್ತಿಗೆ ನೀಡಿದ್ದರು. ಸದ್ಯ ಶೂಟರ್ ಫಜಲ್​ನನ್ನು ಬಂಧಿಸಿರುವ ಪೊಲೀಸರು ಅಕ್ರಮ ಪಿಸ್ತೂಲ್, ಎರಡು ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ಒಪ್ಪಂದದ ಹಣದಲ್ಲಿ 7,200 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಪೂಜಾ ಶಕುನ್ ಪಾಂಡೆ ಮತ್ತು ಮತ್ತೊಬ್ಬ ಶೂಟರ್ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಇಬ್ಬರ ಬಂಧನವು ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಹಲವು ರಹಸ್ಯಗಳನ್ನು ಬಹಿರಂಗಪಡಿಸಬಹುದು. ಯಾಕಂದರೆ ಅಭಿಷೇಕ್ ಗುಪ್ತಾ ಉದ್ಯಮದಲ್ಲಿ, ಶೋ ರೂಂ ಮಾಲೀಕತ್ವದಲ್ಲಿ ಪೂಜಾ ಶಕುನ್ ಪಾಂಡೆ ಪಾಲು ಹೊಂದಲು(ಪಾರ್ಟನರ್ ಶಿಪ್​ಗೆ) ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net