

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ಪಂದನಾ ವಿಜಯ್ ರಾಘವೇಂದ್ರ ಅವರ ಸಾವಿನ ನೋವು ಮಾಸುವ ಮುನ್ನವೇ ಕಿರುತೆರೆ ನಟರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹಿಂದಿ ಮತ್ತು ತಮಿಳು ಸೀರಿಯಲ್ಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದ ನಿವಾಸಿ ಪವನ್ ಸಿಂಗ್(25) ಆಗಸ್ಟ್ 18ರಂದು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಕೆ.ಆರ್. ಪೇಟೆ ಮೂಲದವರಾದ ಪವನ್ ತಮ್ಮ ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಬೆಳ್ಳಿ ಪರದೆ ಮೇಲೆ ಮಿಂಚಬೇಕು ಎಂಬ ಹಂಬಲದೊಂದಿಗೆ ಪವನ್ ಸಿನಿಮಾ ರಂಗವನ್ನು ಪ್ರವೇಶಿಸಿದ್ದರು. ಆದರೆ, ಬೆಳ್ಳಿ ಪರದೆ ಮೇಲೆ ಖ್ಯಾತಿ ಗಳಿಸುವ ಮುನ್ನವೇ ಕ್ರೂರ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಸುದ್ದಿ ಮೂಲಗಳ ಪ್ರಕಾರ ಅವರ ಮೃತದೇಹವನ್ನು ಮುಂಬೈನಿಂದ ಅವರ ಹುಟ್ಟೂರಿಗೆ ತರಲಾಗಿದ್ದು, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅಂತಿಮ ವಿಧಿ-ವಿಧಾನಗಳು ನೆರವೇರಿಸಲಾಗಿದೆ.