

ಗುವಾಹತಿ: ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ‘ಲವ್ ಜಿಹಾದಿ’ಗಳ ವಿರುದ್ಧ ರಾಜ್ಯ ಸರ್ಕಾರ ಇನ್ನಷ್ಟು ಕಠಿಣ ಹೋರಾಟ ಪ್ರಾರಂಭಿಸುತ್ತದೆ ಎಂದು ಅಸ್ಸಾಂ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ದಿಬ್ರೂಗಢದಲ್ಲಿ ಮಹಿಳಾ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ‘‘ಅಸ್ಸಾಮಿನ ಜನರು ಪ್ರತಿ ಚುನಾವಣೆಯಲ್ಲೂ ‘ಅಜ್ಮಲ್ ಆರ್ಮಿ’ಗೆ ಐದು ಕ್ಷೇತ್ರಗಳನ್ನು ಕೊಡುತ್ತಿದ್ದಾರೆ. ಹಾಗಾಗಿ ನಾವು ಲವ್ ಜಿಹಾದ್ ವಿರುದ್ಧ ಹೊಸ ರೀತಿಯ ಕಠಿಣ ಹೋರಾಟ ಆರಂಭಿಸಲೇಬೇಕಾಗಿದೆ. ಧಾರ್ಮಿಕ ಆಶ್ರಯ ಪಡೆದು ಯಾರಾದರೂ ಆಸ್ಸಾಮಿ ಹೆಣ್ಣುಮಕ್ಕಳ ಮೇಲೆ ಕೆಟ್ಟದಾಗಿ ಮಾತನಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯಕ್ರಮ ಕೈಗೊಳ್ಳಲು ಅನುವಾಗುವಂತೆ ಕಾನೂನು ಬಲಪಡಿಸಲಾಗುವುದು’’ ಎಂದು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರ ಹೆಸರು ಹೇಳದೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: PHOTO | ಧೋನಿ ಅಭಿಮಾನಿಯ ಮನೆಗೆ ಸಿಎಸ್‌ಕೆ ಬಣ್ಣ! ಇದಕ್ಕೆ ಮಾಡಿದ ಖರ್ಚು ಎಷ್ಟು ಗೊತ್ತೇ?
‘‘ಅಜ್ಮಲ್ ಆರ್ಮಿಯವರು ನಮ್ಮ ಮಹಿಳೆಯರನ್ನು ಮುಟ್ಟಿದರೆ ಅವರಿಗೆ ಗಲ್ಲುಶಿಕ್ಷೆಯೇ ಗತಿಯಾಗುತ್ತದೆ. ಅದಕ್ಕಿಂತ ಕಡಿಮೆ ಶಿಕ್ಷೆ ಸಿಗುವುದಿಲ್ಲ. ಅಷ್ಟು ನಿರ್ದಯವಾದ ಕಾನೂನು ಬರಲಿದೆ. ಅಸ್ಸಾಮಿನ ಪುತ್ರಿಯರಿಗೆ ಲವ್ ಜಿಹಾದ್ ಎಂಬುದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹುಡುಗರು ನಕಲಿ ಹೆಸರುಗಳನ್ನು ಇಟ್ಟುಕೊಂಡು ಹಿಂದೂ ಯುವತಿಯರನ್ನು ವಂಚಿಸುತ್ತಿದ್ದಾರೆ. ಹಾಗೆ ಅವರ ಹಿಂದೆ ಹೋದ ಅನೇಕರು ಈಗ ತಲಾಖ್ ಸ್ಥಿತಿ ಎದುರಿಸುತ್ತಿದ್ದಾರೆ. ಶೇಕಡಾ 65ರಷ್ಟಿರುವ ನಾವು ಇಂತಹ ಪರಿಸ್ಥಿತಿಯ ವಿರುದ್ಧ ಹೋರಾಡದಿದ್ದರೆ ಇನ್ನು 15 ವರ್ಷಗಳಲ್ಲಿ ನಾವಿಲ್ಲಿ ಬದುಕುವುದೂ ಸಾಧ್ಯವಿಲ್ಲದಂತಾಗುತ್ತದೆ’’ ಎಂದು ವಿವರಿಸಿದರು.