ಶಿಕ್ಷಕರ ನೇಮಕಾತಿಗೆ ಹಿನ್ನಡೆ: 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿಗೆ ಹೈಕೋರ್ಟ್ ತಡೆ

High_CourtKarntaka11
Published on

ಬೆಂಗಳೂರು: ರಾಜ್ಯದಲ್ಲಿ ನೇಮಕಾತಿಯ ನಿರೀಕ್ಷೆಯಲ್ಲಿದ್ದ ಸಾವಿರಾರು ಶಿಕ್ಷಕ ಹುದ್ದೆ ಆಕಾಂಕ್ಷಿಗಳು ನಿರಾಶರಾಗುವಂಥ ಬೆಳವಣಿಗೆಯೊಂದು ನಡೆದಿದೆ. ಏಕೆಂದರೆ 15 ಸಾವಿರ ಪದವೀಧರ ಶಾಲಾಶಿಕ್ಷಕರ ನೇಮಕಾತಿಗೆ ಸಂಬಂಧಿತ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಮೂಲಕ ಶಿಕ್ಷಕರ ನೇಮಕಾತಿಗೆ ಹಿನ್ನಡೆ ಆದಂತಾಗಿದೆ.

ರಾಜ್ಯದಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿದ್ದು, ಆ ಪೈಕಿ 13,363 ಅಭ್ಯರ್ಥಿಗಳಷ್ಟೇ ಆಯ್ಕೆ ಆಗಿದ್ದರು. ಉಳಿದ 1,637 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಲ್ಲದ ಕಾರಣ ಅವು ಖಾಲಿ ಉಳಿದಿದ್ದವು. ಈ ಮಧ್ಯೆ ಶಿಕ್ಷಕರ ನೇಮಕಾತಿ ಸಂಬಂಧ ಹೊರಡಿಸಲಾಗಿದ್ದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ವಿರುದ್ಧ ಅಕ್ಷತಾ ಚೌಗಲೆ ಎಂಬವರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ನ. 28ರಂದು ವಿಚಾರಣೆಗೆ ಬಂದಿದ್ದು, ನ. 18ರಂದು ಪ್ರಕಟಿಸಲಾಗಿರುವ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮುಂದಿನ ಆದೇಶದವರೆಗೆ ಅನ್ವಯಿಸುವಂತೆ ತಡೆ ಹಿಡಿದು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಆದೇಶ ಹೊರಡಿಸಿದ್ದಾರೆ. ಅಕ್ಷತಾ ಚೌಗಲೆ ಪರವಾಗಿ ನ್ಯಾಯವಾದಿ ಲತಾ ಶೆಟ್ಟಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net