

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ಚಿಕಿತ್ಸೆಯ ಕಾರಣಕ್ಕೆ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ (Darshan) ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಅವರಿಗೆ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ. ಇತ್ತ ನಟ ದರ್ಶನ್ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿದೆ.
ಗೆಳತಿ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸ್ಸೇಜ್ ಕಳುಹಿಸಿದ್ದ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರವಾದ ಬಳಿಕ ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದ್ದ ನಟ ದರ್ಶನ್ಗೆ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನನ್ನು ನೀಡಿತ್ತು. ಇದೀಗ ಜಾಮೀನು ಅವಧಿ ಮುಕ್ತಾಯವಾಗುತ್ತಿರುವ ಬೆನ್ನಲ್ಲೇ ನಟ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ನಟ ದರ್ಶನ್, ಪವಿತ್ರಾ ಗೌಡ ಸೇರಿ 6 ಮಂದಿ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿದ್ಧಾರೆ. ಇದೇ ವೇಳೆ ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಬೆನ್ನು ನೋವಿನ ಕಾರಣ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಬಿಡುಗಡೆಯಾಗಿ ಮೂರು ವಾರಗಳಾಗಿದ್ದು, ಚಿಕಿತ್ಸೆಗೆಂದು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಡುಗಡೆಯಾಗಿ ಮೂರು ವಾರಗಳಾದರೂ ಈವರೆಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡಿಲ್ಲ ಎಂದು ಹೇಳಲಾಗಿದ್ದು, ಮಧ್ಯಂತರ ಜಾಮೀನು ರದ್ದತಿ ಕೋರಿ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದು, ನವೆಂಬರ್ 26ರಂದು ಏನಾಗಲಿದೆ ಎಂದು ಕಾದು ನೋಡಬೇಕಿದೆ.