

ಬೆಂಗಳೂರು: ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್) ಅಡಿ ನ್ಯಾಯಬೆಲೆ ಅಂಗಡಿ ತೆರೆಯಲು ಮಾನವೀಯ ನೆಲೆಗಟ್ಟಿನಲ್ಲಿ ಅನುಮತಿ ನೀಡುವಾಗ ಷರತ್ತುಗಳನ್ನು ವಿಧಿಸುವ ವಿಶೇಷ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುತ್ತದೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಅನುಕಂಪದ ಆಧಾರದಲ್ಲಿ ಅರ್ಜಿ ಸಲ್ಲಿಸುವವರಿಗೆ ವಯೋಮಿತಿ ನಿಗದಿ ಹಾಗೂ ಕಡ್ಡಾಯವಾಗಿ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕೆಂಬ ಷರತ್ತುಗಳನ್ನು ವಿಧಿಸಿರುವ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ.
‘ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ವ್ಯವಸ್ಥೆ (ನಿಯಂತ್ರಣ) ಆದೇಶ-2016ರ ಸೆಕ್ಷನ್ 13ಕ್ಕೆ ಸರ್ಕಾರ ತಂದಿದ್ದ ಕ್ರಮ ಪ್ರಶ್ನಿಸಿ ವಿ.ಸಿ.ಮನಮೋಹನ್ಕುಮಾರ್, ಬಿ.ಎನ್.ದಯಾನಂದ ಸೇರಿ 60 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಜತೆಗೆ, ಪ್ರಕರಣದ ವಿಶೇಷ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿದಾರರಿಗೂ ಪರಿಹಾರ ಒದಗಿಸಿರುವ ಪೀಠ, ಅರ್ಜಿದಾರರ ಮನವಿಗಳನ್ನು ಒಂದು ಬಾರಿಯ ಕ್ರಮವಾಗಿ ವಯಸ್ಸು ಹಾಗೂ ಶೈಕ್ಷಣಿಕ ಅರ್ಹತೆಯ ಅಂಶವನ್ನು ಬದಿಗಿರಿಸಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ. ಈ ಆದೇಶ ಕೇವಲ ಅರ್ಜಿದಾರರಿಗೆ ಮಾತ್ರ ಅನ್ವಯಿಸಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆಕ್ಷೇಪವೇನು?: ಕಾನೂನಿಗೆ ತಿದ್ದುಪಡಿ ತಂದಿದ್ದ ಸರ್ಕಾರ, ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದಿರುವ ಡೀಲರ್ 65 ವರ್ಷದೊಳಗೆ ಮೃತಪಟ್ಟರೆ, ಆತನ ಪತ್ನಿ (65 ವರ್ಷ ಮೀರದ) ಅಥವಾ 18 ವರ್ಷ ತುಂಬಿದ ನಿರುದ್ಯೋಗಿ ಪುತ್ರ ಅಥವಾ ಅವಿವಾಹಿತ ಪುತ್ರಿ ಅಥವಾ 18 ವರ್ಷ ತುಂಬಿದ ವಿಧವೆ ಪುತ್ರಿಗೆ ಪರವಾನಗಿ ವರ್ಗಾಯಿಸಬಹುದಾಗಿದೆ. ಡೀಲರ್ ಮೃತಪಟ್ಟ ದಿನಕ್ಕೆ ಅನ್ವಯಿಸುವಂತೆ 10ನೇ ತರಗತಿ ಉತ್ತೀರ್ಣರಾಗಿಬೇಕು ಅಥವಾ ತತ್ಸಂಬಂಧ ವಿದ್ಯಾರ್ಹತೆ ಹೊಂದಿರಬೇಕು ಎಂಬ ಷರತ್ತುಗಳನ್ನು ವಿಧಿಸಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಕೇಂದ್ರ-ರಾಜ್ಯಕ್ಕೆ ನೋಟಿಸ್: ಸ್ನಾತಕೋತ್ತರ ವೈದ್ಯಕೀಯ ಪದವಿ ಪೂರೈಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ 1 ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕೆಂಬ ಕಾನೂನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಗೊಳಿಸಿದೆ.
ಡಾ.ಕೀರ್ತಿ ಕರ್ನಲ್ ಸೇರಿ 160ಕ್ಕೂ ಅಧಿಕ ಮಂದಿ ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು, ಕಡ್ಡಾಯ ಗ್ರಾಮೀಣ ಸೇವೆಗೆ ಅವಕಾಶ ಕಲ್ಪಿಸುವ ಕರ್ನಾಟಕ ವೈದ್ಯಕೀಯ ಪದವಿ ಪೂರೈಸಿದ ಅಭ್ಯರ್ಥಿಗಳಿಂದ ಕಡ್ಡಾಯ ಸೇವೆ ಕಾಯ್ದೆ- 2012ರ ಸೆಕ್ಷನ್ 4ರ ಸಿಂಧುತ್ವ ಪ್ರಶ್ನಿಸಿ ಏಕಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಕೆಯಾಗಿದೆ. ಆ ಅರ್ಜಿಗಳೂ ಇದೇ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎಂದು ತಿಳಿಸಿದರು. ಇದರಿಂದ, ಎಲ್ಲ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿದ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.