ಹೂಡಿಕೆದಾರರ ಆಧಾರ್ ದೃಢೀಕರಣ; ಸರ್ಕಾರಗಳಿಂದ ಸ್ಪಷ್ಟನೆ ಕೇಳಿದ ಹೈಕೋರ್ಟ್

ima
Published on

ಬೆಂಗಳೂರು: ಐಎಂಎ ಕಂಪೆನಿ ಹೂಡಿಕೆದಾರರ ಆಧಾರ್ ದೃಢೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು, ಠೇವಣಿದಾರರ ಭಾಗಶಃ ಹಣ ಹಿಂಪಾವತಿಸಲು ಕ್ರಮ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಅವರ ಆಧಾರ್ ದೃಢೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈವರೆಗೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ಕೇಂದ್ರ ಸರ್ಕಾರದ ಪರ ವಕೀಲರು, ಆಧಾರ್ ದೃಢೀಕರಣಕ್ಕೆ ನಿಗದಿತ ನಮೂನೆ ಇದೆ. ಆ ಪ್ರಕಾರ ರಾಜ್ಯ ಸರ್ಕಾರ ಮನವಿ ಸಲ್ಲಿಸಿಲ್ಲ. ನಿಗದಿತ ನಮೂನೆಯಲ್ಲಿ ಮನವಿ ಸಲ್ಲಿಸಿದರೆ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಆಧಾರ್ ದೃಢೀಕರಣ ಕೋರಿ 2019ರಲ್ಲೇ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. 2020ರ ಅಕ್ಟೋಬರ್ ಮುಗಿದರೂ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ಎರಡೂ ಸರ್ಕಾರಗಳ ನಡುವಿನ ಗೊಂದಲದಿಂದಾಗಿ ಸಾವಿರಾರರು ಠೇವಣಿದಾರರು ಕಷ್ಟ ಅನುಭವಿಸುವಂತಾಗಿದೆ. ಈ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸೂಚಿಸಿ ವಿಚಾರಣೆಯನ್ನು ನ.11ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net