ಹಾಸನ ಹೊರವಲಯದಲ್ಲಿ ಮೊಳಗಿತು ಗುಂಡಿನ ಸದ್ದು​ : ಪಿಎಸ್​ಐ ಮೇಲೆ ಹಲ್ಲೆ ನಡೆಸಿದ ರೌಡಿ ಶೀಟರ್

Firing
Published on

ಹಾಸನ: ಹೊರವಲಯದ ಕೃಷ್ಣ ನಗರದಲ್ಲಿ ಮಂಗಳವಾರ ರಾತ್ರಿ ಗ್ರಾಮಾಂತರ ಠಾಣೆ ಪಿಎಸ್​ಐ ಬಸವರಾಜ್ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್ ಸುನೀಲ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು ಗಾಯಗೊಂಡ ಆರೋಪಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರೆಕಲ್ಲು ಹೊಸಹಳ್ಳಿಯ ಸುನೀಲ್ (32) ಮಾರಣಾಂತಿಕ ಹಲ್ಲೆ ಸೇರಿ 7 ಪ್ರಕರಣಗಳ ಆರೋಪಿಯಾಗಿದ್ದಾನೆ. ಆತನಿಂದ ಹಲ್ಲೆಗೊಳಗಾದ ಪಿಎಸೈ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುನೀಲ್ ಮತ್ತು ಆತನ ಸಹಚರರಾದ ಅರೆಕಲ್ಲು ಹೊಸಹಳ್ಳಿ ಸಂತೋಷ್, ದೊಡ್ಡ ಮಂಡಿಗನಹಳ್ಳಿ ಪ್ರತಾಪ್, ಸೂರಿ, ರವಿ, ಸಂತೋಷ್ ಹಾಗೂ ಆಲೂರು ತಾಲೂಕಿನ ಸತೀಶ್ ಅ. 23ರಂದು ಮೂರು ಮಂದಿ ಮೇಲೆ ದಾಳಿ ಮಾಡಿ, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಬಸವರಾಜ್, ಖಚಿತ ಮಾಹಿತಿಯ ಮೇರೆಗೆ ಸುನೀಲ್ ಸೇರಿದಂತೆ ಆರು ಮಂದಿ ಹಾಸನ ಹೊರವಲಯದ ಕೃಷ್ಣ ನಗರದ ಬಳಿ ಇರುವುದನ್ನು ದೃಢಪಡಿಸಿಕೊಂಡು, ಅವರನ್ನು ಬಂಧಿಸಲು ತೆರಳಿದ್ದರು.

ಪಿಎಸ್​ಐ ಬಸವರಾಜ್ ಮದ್ಯಪಾನ ಮಾಡುತ್ತಾ ಕುಳಿತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಮೂವರು ಆರೋಪಿಗಳು ಪರಾರಿಯಾಗಿದ್ದು ಇಬ್ಬರನ್ನು ವಶಕ್ಕೆ ಪಡೆದರು. ಆದರೆ ಪ್ರಮುಖ ಆರೋಪಿ ಸುನೀಲ್ ತಪ್ಪಿಸಿಕೊಳ್ಳಲು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ. ಇದರಿಂದ ಬಸವರಾಜ್ ಅವರ ಹೊಟ್ಟೆ ಮತ್ತು ಎಡಗೈಗೆ ಗಂಭೀರ ಗಾಯವಾಯಿತು. ತಕ್ಷಣ ಅವರ ರಕ್ಷಣೆಗಾಗಿ ಸ್ಥಳದಲ್ಲಿದ್ದ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಸುರೇಶ್, ಆರೋಪಿ ಸುನೀಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net