More

    ಆಶ್ಚರ್ಯ ಚಿಹ್ನೆಯನ್ನು ಖಾಲಿ ಮಾಡುವ ನೀಲಿ ತಿಮಿಂಗಲಗಳು!!!

    | ಸುರೇಶ ಮರಕಾಲ ಸಾಯ್ಬರಕಟ್ಟೆ

    ಪ್ರಕೃತಿಯಲ್ಲಿನ ಅನೇಕ ವಿಚಾರಗಳು ನಮ್ಮ ಊಹೆಗೂ ನಿಲುಕದಂಥವುಗಳು. ಕೆಲವೊಂದು ವಿಚಾರಗಳನ್ನು ನೋಡದ ಹೊರತು ನಂಬಲೂ ಸಾಧ್ಯವಿಲ್ಲ! ಇನ್ನೂ ಒಂದು ವಿಚಾರವೆಂದರೆ, ಮನುಷ್ಯ ಇಂದು ಏನೆಲ್ಲ ನಿರ್ಮಿಸಿದ್ದಾನೋ, ಅವೆಲ್ಲವೂ ಪ್ರಕೃತಿಯಿಂದ ನೇರವಾಗಿ ತೆಗೆದ ನಕಲು- ಅಷ್ಟೆ! ಮೀನನ್ನು ನೋಡಿದ ಈಜಾಡಿದ; ಹಡಗುಗಳನ್ನು ಮಾಡಿದ, ಹಕ್ಕಿಗಳನ್ನು ನೋಡಿದ ಹಾರಾಡಲು ವಿಮಾನಗಳನ್ನು ಮಾಡಿದ, ಪ್ರಾಣಿಗಳ ವೇಗ ನೋಡಿದ ವಾಹನಗಳಿಗೆ ಅದು ಸ್ಪೂರ್ತಿಯಾಯಿತು. ಹೆಲಿಕಾಪ್ಟರ್ ನೋಡಿದರೆ ಏರೋಪ್ಲೇನ್ ಚಿಟ್ಟೆಯ ತದ್ರೂಪ ಎನಿಸುವುದಿಲ್ಲವೆ?, ವಿಮಾನ ನೋಡಿದರೆ ರೆಕ್ಕೆ ಮಿಟುಕಾಡಿಸದೆ ಆಗಸದಲ್ಲಿ ಚುಕ್ಕಿಯಂತೆ ತೇಲಾಡುವ ಗಿಡುಗನ ನೆನಪಾಗೋದಿಲ್ವೆ? ಬೈಕ್‌ಗಳಂತೂ ಕೆಲವೊಮ್ಮೆ ಸಾಕ್ಷಾತ್ ಚಿರತೆಯ ಪ್ರತಿರೂಪ ಅನಿಸುತ್ತದೆ! ಆರೇಳು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದ ಒಂದು ಬೈಕ್‌ನ್ನು ಕಂಡಾಗಲಂತೂ, ಶಾಲಾ ಮಕ್ಕಳನ್ನು ಮೈಸೂರು ಮೃಗಾಲಯಕ್ಕೆ ಕರೆದುಕೊಂಡು ಹೋಗಿದ್ದಾಗ ಅಲ್ಲಿ ನಮ್ಮನ್ನು ನೋಡಿ ಮಲೆಯುತ್ತಿದ್ದ ಏರುಭುಜದ ಕಾಡುಕೋಣವನ್ನು ನೋಡಿದ ಹಾಗಾಯ್ತು! ನಾವೇನು ಮಾಡಿದರೂ ಅದು ಪ್ರಕೃತಿಯ ಪಡಿಯಚ್ಚು ಮಾತ್ರ! ನಮ್ಮ ಸಂಗೀತ, ಸಾಹಿತ್ಯ, ಬರಹ ಎಲ್ಲವೂ ಮನುಷ್ಯ ಯಾವುದೋ ಅಮೃತ ಗಳಿಗೆಯಲ್ಲಿ ಪಡೆದುಕೊಂಡ ಪ್ರೇರಣೆ ಅಷ್ಟೆ. ನಾವು ಮಾತಾಡುವಾಗಲೂ ಅಷ್ಟೆ, ಚಿಕ್ಕದನ್ನು ಉದಾಹರಿಸುವಾಗ “ಸಾಸಿವೆಯಷ್ಟು ಚಿಕ್ಕದು” ಎನ್ನುತ್ತೇವೆ, ದೊಡ್ಡದನ್ನು ಹೇಳುವಾಗ “ಆನೆಯಂತೆ” ಅಂತಲೋ, “ಸಾಗರದಂತೆ” ಅಂತಲೋ- ಒಟ್ಟಿನಲ್ಲಿ ನಮ್ಮ ಉದಾಹರಣೆ-ಉಪಮೆ ಎಲ್ಲವನ್ನೂ ನಮ್ಮ ಸುತ್ತಲಿನ ಪ್ರಕೃತಿಯಿಂದಲೇ ಕದಿಯಬೇಕು! ಆದರೆ ಪ್ರಕೃತಿ ಮಾತ್ರ ಯಾವಾಗಲೂ ಯಾರಿಂದಲೂ ಕದಿಯುವುದಿಲ್ಲ. ಅದು ತನ್ನಷ್ಟಕ್ಕೆ ತಾನೇ ಸ್ವಯಂ ಪರಿಪೂರ್ಣ! ನಮ್ಮ ಊಹೆಗೂ ನಿಲುಕದ ಜೀವಿಗಳ್ನು ಸೃಷ್ಟಿಸುತ್ತದೆ, ಬೇಡವೆಂದಾಗ ಮುಲಾಜಿಲ್ಲದೆ ಒರೆಸಿ ಹಾಕುತ್ತದೆ! ಪ್ರಕೃತಿಯಲ್ಲಿ ಚಿಕ್ಕದು ಎಂದರೆ ನಮ್ಮ ಯೋಚನೆಗೂ ಸಿಗದಷ್ಟು ಸಣ್ಣದಾಗಿರುವ – ಸಧ್ಯ ಇಂದು ವಿಜ್ಞಾನ ನಂಬಿರುವ ‘ಕ್ವಾರ್ಕ್’ಗಳಾದರೆ, ದೊಡ್ಡದೆಂದರೆ ನಮ್ಮ ಊಹನಾ ವ್ಯೂಹವನ್ನೂ ಭೇದಿಸಿ ಹೋಗುವಂತಹುದನ್ನು ಪ್ರಕೃತಿ ಸೃಷ್ಟಿಸಿರುತ್ತದೆ. ಪ್ರಕೃತಿ ಸೃಷ್ಟಿಸಿದ ಬೃಹತ್ ಜೀವಿಗಳಲ್ಲಿ ಇಂದು ನಮ್ಮೊಂದಿಗಿರುವ ಅತ್ಯಂತ ದೊಡ್ಡ ಜೀವಿ ಎಂದರೆ ಸಾಗರದ ರಾಜ- ನೀಲಿ ತಿಮಿಂಗಲ!

    ನೀಲಿ ತಿಮಿಂಗಲವನ್ನು ವಿವರಿಸಬೇಕಾದರೆ ನಮ್ಮ ಕಲ್ಪನೆಯನ್ನು ನೂರಾರು ಪಟ್ಟು ಹಿಗ್ಗಿಸಿಕೊಂಡು ಭೂತಕನ್ನಡಿಯಲ್ಲಿ ನೋಡಿಕೊಳ್ಳಬೇಕು! ಇಲ್ಲಿ ಎಲ್ಲವೂ ದೊಡ್ಡದು. ನೀಲಿ ತಿಮಿಂಗಿಲದ ಗಾತ್ರ ಕೇಳಿದರೇ ಹೌಹಾರುತ್ತೀರಿ- ಚೆನ್ನಾಗಿ ಬೆಳೆದ ನೀಲಿ ತಿಮಿಂಗಲ ಹತ್ತಿರತ್ತಿರ ಒಂದು ಲಕ್ಷದ ಎಪ್ಪತ್ತೆರಡು ಸಾವಿರ ಕೆ.ಜಿ. ತೂಗುತ್ತದೆ!! ಎಂದರೆ ತಕ್ಕಡಿಯ ಒಂದು ತಟ್ಟೆಯಲ್ಲಿ ನೀಲಿ ತಿಮಿಂಗಲವನ್ನು ಹಾಕಿದರೆ, ಇನ್ನೊಂದು ತಟ್ಟೆಯಲ್ಲಿ ಸುಮಾರು ನಲವತ್ತೈದು ದೈತ್ಯ ಆಫ್ರಿಕಾ ಆನೆಗಳನ್ನು ಹಾಕಬೇಕು, ಅದೇ ಭಾರತದ ಆನೆಗಳಾದರೆ ಸುಮಾರು ಅರವತ್ತೆಂಟರಿಂದ ರಿಂದ ಎಪ್ಪತ್ತು ಆನೆಗಳು- ಅಷ್ಟು ಭಾರ!! ಅದರ ಉದ್ದ ಬರೋಬ್ಬರಿ ಮೂವತ್ತು ಮೀಟರ್‌ಗಿಂತಲೂ ಹೆಚ್ಚು. ಸ್ಪಷ್ಟವಾಗಿ ಹೇಳುವುದಾದರೆ ಮೈದಾನವೊಂದರಲ್ಲಿ ಒಬ್ಬನ ತಲೆಯ ಮುಂದೆ ಮತ್ತೊಬ್ಬನಂತೆ ಸಾಲಾಗಿ ಇಪ್ಪತ್ತು ಜನರು ಮಲಗಿದರೆ ಎಷ್ಟು ಉದ್ದವಾದೀತೋ ಅಷ್ಟು!! ಇನ್ನೂ ಸರಳವಾಗಿ ಹೇಳುವುದಾದರೆ ಮೂರು ಶಾಲಾ ಬಸ್‌ಗಳನ್ನು ಸಾಲಾಗಿ ನಿಲ್ಲಿಸಿದರೆ ಎಷ್ಟು ಉದ್ದವಾಗಬಹುದೋ, ಅಷ್ಟು..!! ಅದರ ಚರ್ಬಿಯೇ (ಚರ್ಮದ ಅಡಿಭಾಗದ ಕೊಬ್ಬು) ಒಂದೂವರೆ ಫೀಟ್ ದಪ್ಪವಿದೆ! ಇದು ಎಷ್ಟು ದಪ್ಪವೆಂದು ತಿಳಿಯಬೇಕಾದರೆ, ಬೇರೆ ಪ್ರಾಣಿಗಳ ಚರ್ಬಿಯನ್ನು ತಿಳಿಯಬೇಕು. ಬೇರೆ ಪ್ರಾಣಿಗಳಲ್ಲಿ ಈ ಕೊಬ್ಬು ಗರಿಷ್ಟವೆಂದರೆ ಒಂದರಿಂದ ಎರಡು ಇಂಚು ಇದ್ದರೆ ಅದೇ ಹೆಚ್ಚು!! ಅದಕ್ಕೇ ಹೇಳಿದ್ದು; ನೀಲಿ ತಿಮಿಂಗಲದ ಬಗ್ಗೆ ಯೋಚಿಸುವಾಗ ಎಲ್ಲವನ್ನೂ ಭೂತಕನ್ನಡಿಯಲ್ಲಿ ಕಂಡ ಹಾಗೆ ಚಿತ್ರಿಸಿಕೊಳ್ಳಬೇಕು!!

    ಆಶ್ಚರ್ಯ ಚಿಹ್ನೆಯನ್ನು ಖಾಲಿ ಮಾಡುವ ನೀಲಿ ತಿಮಿಂಗಲಗಳು!!!

    ಅದರ ಹೃದಯ ಎಷ್ಟು ಭಾರವಿರಬುದು? 2 ಕೆ.ಜಿ?, 5 ಕೆ.ಜಿ?, 10? ನೀವು ಕುಸಿದುಬೀಳುತ್ತೀರಿ!, ಅದರ ಹೃದಯದ ಭಾರವೇ 180 ರಿಂದ 200 ಕೆ.ಜಿ!! ಇಂದು ಭೂಮಿಯ ಮೇಲಿರುವ ಜೀವಿಗಳಲ್ಲೇ ಅತ್ಯಂತ ದೊಡ್ಡದಾದ ಹಾಗೂ ತೂಕದ ಹೃದಯವನ್ನು ಹೊಂದಿರುವ ಜೀವಿಯೆಂದರೆ ಇದೇ ನೀಲಿ ತಿಮಿಂಗಲಗಳು! ನೀವು ಆಶ್ಚರ್ಯದ ತುತ್ತತುದಿ ತಲುಪಬಹದು; ನೀಲಿ ತಿಮಿಂಗಲಗಳ ಹೃದಯದ ನಾಳದೊಳಗೆ ಸಲೀಸಾಗಿ ಮನುಷ್ಯನೊನ್ನ ತೆವಳುತ್ತಾ ಸಾಗಬಹುದು! ನಾಲಗೆಯ ಭಾರ -ನೀವು ನಂಬಲಾರಿರಿ- ಎರಡೂವರೆ ಸಾವಿರ ಕೆ.ಜಿ!! ಅದರ ಪಿತ್ತಜನಕಾಂಗವೋ ಒಂದು ಸಾವಿರ ಕೆ.ಜಿ!! ಆದರೆ, ನೀವು ನಗುತ್ತೀರಿ, ನೀಲಿ ತಿಮಿಂಗಲದ ಮಿದುಳಿನ ಭಾರ ಮಾತ್ರ ಕೇವಲ ಐದು ಕೆ.ಜಿ!!! ಸ್ಪರ್ಮ್ ವ್ಹೇಲ್ಗಳಲ್ಲಿ (Sperm Whale) ಸ್ವಲ್ಪ ದೊಡ್ಡದು- ಎಂದರೆ ಏಳು ಕೆ.ಜಿ! ಅಷ್ಟೊಂದು ದೈತ್ಯ ದೇಹಿಯ ನೀಲಿ ತಿಮಿಂಗಲಕ್ಕೆ ಸಾಸಿವೆ ಕಾಳಿನ ಗಾತ್ರದ ಮಿದುಳು!!

    ನೀಲಿ ತಿಮಿಂಗಲಗಳು ಸಾಮಾನ್ಯವಾಗಿ ಗುಂಪಿನಲ್ಲಿ ಇರುವುದಿಲ್ಲ. ಹೆಚ್ಚೆಂದರೆ ಎರಡು-ಮೂರು ಮೀನುಗಳ ಗುಂಪನ್ನು ಕಟ್ಟಿಕೊಂಡಿರುತ್ತದೆ. ಈ ಮೀನುಗಳು ಇಷ್ಟೊಂದು ಅಗಾಧ ಗಾತ್ರದಲ್ಲಿ ಬೆಳೆಯಲು ಮುಖ್ಯ ಕಾರಣ ಸಾಗರದಲ್ಲಿ ಸಿಗುವ ಹೇರಳವಾದ ಆಹಾರ ಹಾಗೂ ನೀರಿನ ತಂಪು ವಾತಾವರಣ. ದಿನವೊಂದಕ್ಕೆ ನೀಲಿ ತಿಮಿಂಗಲ ನಾಲ್ಕು ಸಾವಿರ ಕೆ.ಜಿ. ಆಹಾರವನ್ನು ಸೇವಿಸಬಲ್ಲದು!! ಅದರ ಹೊಟ್ಟೆ ಮೂರು ಮೀಟರ್ ಉದ್ದವಿದ್ದು, 500 ಕೆ.ಜಿ ತೂಗುತ್ತದೆ! ಒಂದು ಬಾರಿಗೆ ಈ ತುತ್ತಿನ ಚೀಲದಲ್ಲಿ (‘ಚೀಲ’ ಎನ್ನುವುದಕ್ಕಿಂತ “ಕೊಪ್ಪರಿಗೆ ಎನ್ನುವುದು ಸೂಕ್ತವಾದೀತು!!) ಕನಿಷ್ಟ ಒಂದು ಸಾವಿರದ ಇನ್ನೂರು ಕೆ.ಜಿ ಆಹಾರ ಹಿಡಿಯುತ್ತದೆ! ಮತ್ತೊಂದು ಕುತೂಹಲದ ವಿಚಾರವೇನೆಂದರೆ, ನೀಲಿ ತಿಮಿಂಗಲದ ಕಣ್ಣುಗಳು ಅತ್ಯಂತ ಚಿಕ್ಕವು, ಎಷ್ಟು ಚಿಕ್ಕವು ಎಂದರೆ, ಅಷ್ಟು ದೊಡ್ಡದಾದ ಅದರ ದೇಹದಲ್ಲಿ ಅದರ ಕಣ್ಣುಗಳು ನಮಗೆ ಮೊದಲ ನೋಟಕ್ಕೆ ಸರಿಯಾಗಿ ಕಾಣಿಸುವುದೇ ಇಲ್ಲ!!

    ನೀಲಿ ತಿಮಿಂಗಲಕ್ಕೆ ಉಸಿರಾಡಲು ಉತ್ತಮವಾದ ಶ್ವಾಸಕೋಶಗಳಿದ್ದು, ನೀರಿನಿಂದ ಹದಿನೈದು ನಿಮಿಷಗಳಿಗೊಮ್ಮೆ ಮೇಲೆ ಬಂದು ನೆತ್ತಿಯ ಮೇಲಿರುವ ರಂದ್ರದ ಮೂಲಕ ಪುಸ್ಸನೆ ಉಸಿರನ್ನು ಹೊರಬಿಡುತ್ತದೆ. ಹೊರಬಿಡುವ ಈ ಉಸಿರಿನ ಗಾಳಿಯು, ನೀರಿನೊಂದಿಗೆ ಸೇರಿ ಒಮ್ಮೆಲೇ ಹನ್ನೆರಡು ಮೀಟರ್ ಎತ್ತರದವರೆಗೆ ಕಾರಂಜಿಯಂತೆ ಚಿಮ್ಮುತ್ತದೆ! ಆಶ್ಚರ್ಯವೆಂದರೆ ನಿಶ್ವಾಸದ ಈ ಸದ್ದು ಕನಿಷ್ಟ ಎರಡು ಕಿಲೋ ಮೀಟರ್ ದೂರದವರೆಗೂ ಕೇಳಿಸುತ್ತದೆ! ಅನಿವಾರ್ಯ ಸಂದರ್ಭಗಳಲ್ಲಿ ನೀಲಿ ತಿಮಿಂಗಲ ಒಂದು ಗಂಟೆಯವರೆಗೂ ಉಸಿರು ಕಟ್ಟಿಕೊಂಡು ನೀರಿನೊಳಗೆ ಇರಬಲ್ಲದು. ಅದರ ಶ್ವಾಸಕೋಶಗಳು ಒಂದು ಬಾರಿಗೆ ಐದು ಸಾವಿರ ಲೀಟರ್‌ಗಳಷ್ಟು ಗಾಳಿಯನ್ನು ತುಂಬಿಕೊಳ್ಳಬಲ್ಗದು. ಇಷ್ಟು ಪ್ರಮಾಣದ ಗಾಳಿಯನ್ನು ಮನುಷ್ಯನೊಬ್ಬನಿಗೆ ಉಸಿರಾಡಲು ಅನೇಕ ತಿಂಗಳುಗಳೇ ಬೇಕಾಗುತ್ತದೆ!!

    ಆಶ್ಚರ್ಯ ಚಿಹ್ನೆಯನ್ನು ಖಾಲಿ ಮಾಡುವ ನೀಲಿ ತಿಮಿಂಗಲಗಳು!!!

    ನೀಲಿ ತಿಮಿಂಗಲಗಳು ಮರಿ ಹಾಕುವಾಗ ಉಳಿದ ನೀಲಿ ತಿಮಿಂಗಲಗಳು ಅತ್ಯಂತ ಕಾಳಜಿ ವಹಿಸುತ್ತವೆ. ಪ್ರಸವ ಕಾಲದಲ್ಲಿ ಉಳಿದ ಮೀನುಗಳು ದಾದಿಯರಂತೆ ಗರ್ಭಿಣಿ ಮೀನಿಗೆ ಹತ್ತಿರದಲ್ಲಿಯೇ ಇದ್ದು ಸಹಾಯ ಮಾಡುತ್ತವೆ. ಆಗ ತಾನೇ ಹುಟ್ಟಿದ ಮರಿ ಆರರಿಂದ ರಿಂದ ಎಂಟು ಮೀಟರ್ ಉದ್ದವಿದ್ದು, ಎರಡೂವರೆ ಸಾವಿರ ಕೆ.ಜಿ. ತೂಗುತ್ತದೆ!! ದಿನವೊಂದಕ್ಕೆ ಮರಿ 200 ರಿಂದ 570 ಲೀಟರ್ ಹಾಲನ್ನು ಕುಡಿಯುತ್ತದೆ!! ನೀಲಿ ತಿಮಿಂಗಲದ ಹಾಲು ಅತ್ಯಂತ ಜಿಗುಟಾಗಿದ್ದು, ಕೊಬ್ಬಿನಿಂದ ಕೂಡಿದೆ- ಎಂದರೆ ಪ್ರತೀ ಲೀಟರ್‌ಗೆ 200 ರಿಂದ 430 ಗ್ರಾಂ ಕೊಬ್ಬು ತುಂಬಿರುತ್ತದೆ. ನಾವು ಬಳಸುವ ಹಸುವಿನ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಪ್ರತೀ ಲೀಟರ್‌ಗೆ ಸರಾಸರಿ ಕೇವಲ 40 ಗ್ರಾಂ ಇರುತ್ತದೆಂದರೆ, ನೀಲಿ ತಿಮಿಂಗಲದ ಹಾಲು ಎಷ್ಟು ಜಿಗುಟಾಗಿ ಇರಬಹುದು ಯೋಚಿಸಿ! ನೀಲಿ ತಿಮಿಂಗಲಗಳು ಸಾಗರದ ದೈತ್ಯ ಆದರೂ, ಅವುಗಳ ಮರಿಗಳು ಸಾಧು ಸ್ವಭಾವದವುಗಳು. ಹೀಗಾಗಿ ಮರಿಗಳನ್ನು ಶಾರ್ಕ್‌ಗಳು ಹೊಂಚುಹಾಕಿ ಬೇಟೆಯಾಡುತ್ತವೆ. ಈ ಕಾರಣದಿಂದ ತಾಯಿ ತಿಮಿಂಗಲ, ಮಗು ಹಡೆದಾಗ ಅತ್ಯಂತ ನಿಗಾ ವಹಿಸುತ್ತದೆ. ನೀಲಿ ತಿಮಿಂಗಲಗಳ ಮರಿಗಳ ಬೆಳವಣಿಗೆಯೋ ಮತ್ತೊಂದು ಅದ್ಭುತ!! ಪ್ರತೀ ಗಂಟೆಗೆ ಅದರ ದೇಹ ನಾಲ್ಕೂವರೆ ಕೆ.ಜಿ ಹೆಚ್ಚಾಗುತ್ತಿರುತ್ತದೆ, ಎಂದರೆ ಗಂಟೆಯೊಂದಕ್ಕೆ ಮರಿ ತನ್ನ ತೂಕವನ್ನು ನೂರು ಕೆ.ಜಿ ಹೆಚ್ಚಿಸಿಕೊಂಡಿರುತ್ತದೆ! ಒಂಭತ್ತೇ ದಿನಗಳಲ್ಲಿ ಅದರ ತೂಕ ಒಂದು ಸಾವಿರ ಕೆ.ಜಿ. ಹೆಚ್ಚಾಗಿರುತ್ತದೆ!!!

    ನೀಲಿ ತಿಮಿಂಗಲಗಳು ಹಾಡುತ್ತವೆ! ಹೌದು, ಅವು ತಮ್ಮದೇ ಆದ ಉಚ್ಛ ಧ್ವನಿಯನ್ನು ಸೃಷ್ಟಿಸುತ್ತವೆ. ಈ ಧ್ವನಿ 155 ರಿಂದ 188 ಡೆಸಿಬಲ್ಸ್ ಇರುತ್ತದೆ. ವಯಸ್ಕ ಮನುಷ್ಯ ಅತೀ ಹೆಚ್ಚೆಂದರೆ 70 ರಿಂದ 75 ಡೆಸಿಬಲ್ಸ್ ಧ್ವನಿಯನ್ನು ಹೊರಡಿಸಬಲ್ಲ ಎಂದರೆ; ನೀಲಿ ತಿಮಿಂಗಲಗಳ ಧ್ವನಿಯ ಆರ್ಭಟ ನಮಗೆ ಅರ್ಥವಾಗುತ್ತದೆ! ಪ್ರಾಣಿ ಪ್ರಪಂಚದಲ್ಲೇ ಇದು ಅತ್ಯಂತ ದೊಡ್ಡ ಸ್ವರ ಇದು!! ನೀಲಿ ತಿಮಿಂಗಲನ ಕಿವಿ ತೂತಾಗಿಸುವ ಈ ಧ್ವನಿಯ ವಿಶೇಷತೆಯೆಂದರೆ, ಪ್ರತಿಯೊಂದುಬರುತ್ತವೆಕ್ಕೂ ತನ್ನದೇ ಆದ ಧ್ವನಿ ಇರುತ್ತದೆ. ಹಾಗೂ ಈ ಧ್ವನಿಯ ಮೂಲಕವೇ ಒಂದು ಮತ್ತೊಂದನ್ನು ಗುರುತಿಸುತ್ತದೆ. ಈ ಧ್ವನಿಯು ಗಂಡು ಹೆಣ್ಣನ್ನು ಆಕರ್ಷಿಸಲು, ಒಂದನ್ನೊಂದು ಗುರುತಿಸಲು, ಎಚ್ಚರಿಕೆ ನೀಡಲು, ಆಹಾರದ ರಾಶಿ ಸಿಕ್ಕಿದಾಗ ಇನ್ನೊಂದಕ್ಕೆ ಸೂಚನೆ ನೀಡಲು ಬಳಸುತ್ತವೆ. ನೀಲಿ ತಿಮಿಂಗಲದ ಗಂಟಲಿನಿಂದ ಹೊರಟ ಈ ‘ಸಿಂಹನಾದ’ ಹತ್ತು ಸೆಕೆಂಡ್ಗಳಲ್ಲಿ ಸುಮಾರು ನೂರಾ ಎಂಭತ್ತೈದು ಕಿಲೋ ಮೀಟರ್ ದೂರ ಕ್ರಮಿಸಿ, ಇನ್ನೊಂದು ತಿಮಿಂಗಲವನ್ನು ತಲುಪುತ್ತದೆ!!

    ಆಶ್ಚರ್ಯ ಚಿಹ್ನೆಯನ್ನು ಖಾಲಿ ಮಾಡುವ ನೀಲಿ ತಿಮಿಂಗಲಗಳು!!!

    ಇಷ್ಟೆಲ್ಲ ಹೇಳಿದ ಮೇಲೆ ನಿಮಗೆ ನೀಲಿ ತಿಮಿಂಗಲಗಳನ್ನು ನೋಡಬೇಕು ಎಂಬ ಆಸೆ ಹುಟ್ಟಿರಬಹುದು, ಅಲ್ಲವೆ?! ಹಾಗಿದ್ದರೆ ಇನ್ನೇಕೆ ತಡ, ರಾನ್ ಹೊವಾರ್ಡ್ ನಿರ್ದೇಶನದ ‘InThe Heart Of The Sea’ ಚಲನಚಿತ್ರವನ್ನು ಅಗತ್ಯವಾಗಿ ಒಮ್ಮೆ ನೋಡಿ. ಮನುಷ್ಯನ ಹಣದಾಸೆಯ ದಾಹದೆದುರು ಹೇಗೆ ರಾಕ್ಷಸ ಶಕ್ತಿಯ ನೀಲಿ ತಿಮಿಂಗಿಲಗಳೂ ಸೋತು ಸುಣ್ಣಾಗಬಲ್ಲವು , ಆದರೆ ಅವುಗಳು ಎದುರು ನಿಂತರೆ ಮನುಷ್ಯನ ಕಥೆ ಏನಾಗಬಲ್ಲದು ಎಂಬುದನ್ನು ತೋರಿಸುವ ಸಾರ್ವಕಾಲಿಕ ಶ್ರೇಷ್ಠ ಚಲನಚಿತ್ರವಿದು! ಅಗತ್ಯವಾಗಿ ಒಮ್ಮೆ ನೋಡಿ.

    ಮೊದಲೇ ಹೇಳಿದ ಹಾಗೆ, ನೀಲಿ ತಿಮಿಂಗಲಗಳೇ ಹಾಗೆ. ಬರೆಯುತ್ತಾ ಹೋದರೆ ಬರೇ ಆಶ್ಚರ್ಯಜನಕ ವಿಚಾರಗಳೇ ಬರುತ್ತವೆ. ಅವುಗಳ ಆಕಾರ, ಆಹಾರ, ಜೀವನ ಕ್ರಮ- ಎಲ್ಲವೂ ಒಂದಕ್ಕಿಂತ ಒಂದು ವಿಚಿತ್ರ. ಈ ವಿಚಿತ್ರಗಳನ್ನು ಬರಹಗಳಲ್ಲಿ ಮೂಡಿಸುವಾಗ ‘ಆಶ್ಚರ್ಯ ಚಿಹ್ನೆ’ಗಳು (!) ಅದೆಷ್ಟು ಬಳಕೆಯಾಗುತ್ತವೆ ಎಂದರೆ, ಹಿಂದಿನ ಕಾಲದ ರೀತಿ ಅಚ್ಚು ಮೊಳೆಯ ಮುದ್ರಣಾಲಯವಾಗಿದ್ದರೆ, ಮೊಳೆ ಜೋಡಿಸುವವರು ಅಕ್ಷರದ ಮೊಳೆ ಜೋಡಿಸುವಾಗ, ‘!’ ಚಿಹ್ನೆ ಖಾಲಿ ಮಾಡುತ್ತಾನೆಂದು ನನ್ನ ಮೇಲೆ ಕೋಪಗೊಳ್ಳುತ್ತಿದ್ದರೇನೋ! ಆದರೆ ನನ್ನ ಅದೃಷ್ಟ, ಈಗ ಅಕ್ಷರಗಳನ್ನು ಕಂಪ್ಯೂಟರ್ನಲ್ಲಿ ಟೈಪಿಸುವುದರಿಂದ ‘!’ ಚಿಹ್ನೆಗೇನೂ ಬರಗಾಲವಿಲ್ಲ! ಅವರ ನಾನು ಬಚಾವಾದೆ, ಸಧ್ಯ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts