ಥಗ್ ಲೈಫ್‌ಗೆ ನಿರ್ಬಂಧ ತೆರವು ಕೋರಿ ಹೈಕೋರ್ಟ್ ಮೊರೆ : ನ್ಯಾಯಾಲಯದ ಮೆಟ್ಟಿಲೇರಿದ ಕಮಲ್ ವಿವಾದ ರಾಜ್ಯದಲ್ಲಿ ಮುಂದುವರಿದ ಆಕ್ರೋಶ

highcourt
Published on

ಬೆಂಗಳೂರು: ‘ತಮಿಳಿನಿಂದ ಕನ್ನಡ ಹುಟ್ಟಿದ್ದು’ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮುಖೇನ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿರುವ ನಟ ಕಮಲ್ ಹಾಸನ್ ನಟನೆಯ ‘ಥಗ್‌ಲೈಫ್’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ವ್ಯಕ್ತವಾಗಿರುವ ವಿರೋಧದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಹೈಕೋರ್ಟ್ ಮೊರೆ ಹೋಗಿದೆ.

ಥಗ್ ಲೈಫ್ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ನಾರಾಯಣ್ ಅವರು ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗ ಬರಬೇಕಿದೆ.

‘ಥಗ್ ಲೈಫ್’ ಚಿತ್ರದ ಪ್ರಚಾರ ಸಮಾರಂಭವೊಂದರಲ್ಲಿ ಕನ್ನಡ ಮತ್ತು ತಮಿಳಿನ ನಡುವಿನ ಬಾಂಧವ್ಯವನ್ನು ವಿವರಿಸುತ್ತಾ ನಟ ಕಮಲ್ ಹಾಸನ್ ಅವರು, ‘ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದ್ದು’ ಎಂದು ನೀಡಿದ್ದ ಹೇಳಿಕೆಗೆ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಜೂ.5ಕ್ಕೆ ಬಿಡುಗಡೆ ಆಗಲಿರುವ ಸಿನಿಮಾ ಪ್ರದರ್ಶನವನ್ನು ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶಿಸಬೇಕು. ಸಿನಿಮಾ ಪ್ರದರ್ಶನ, ಥಿಯೇಟರ್, ಸಿನಿಮಾ ನೋಡಲು ಹೋಗುವ ಜನರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ಹಂಚಿಕೆದಾರರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸಂಸ್ಥೆಯು ಮನವಿ ಮಾಡಿದೆ.

ಸಿಬಿಎಫ್‌ಸಿಯು ಸಿನಿಮಾ ಬಿಡುಗಡೆಗೆ ಸರ್ಟಿಫಿಕೇಟ್ ನೀಡಿದ್ದು, ಕರ್ನಾಟಕ ರಾಜ್ಯ ವಾಣಿಜ್ಯ ಮಂಡಳಿಗೆ ‘ಥಗ್ ಲೈಫ್’ ನಿಷೇಧಿಸಲು ಯಾವುದೇ ಹಕ್ಕು ಇಲ್ಲ. ಸಿನಿಮಾ ಬಿಡುಗಡೆಗೆ ನಿಷೇಧ ಹೇರುವುದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಲಿದ್ದು, ಸಿನಿಮಾ ಪ್ರದರ್ಶಿಸುವ ಮತ್ತು ಅದನ್ನು ವೀಕ್ಷಿಸಲಿಚ್ಚಿಸುವ ಜನರ ಬಯಕೆಗೆ ಧಕ್ಕೆ ಉಂಟಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net