ಬೆಂಗಳೂರು: ಮಾಜಿ ಸಂಸದರ ಸಹೋದರಿ ಎಂದು ಹೇಳಿಕೊಂಡು 3.25 ಕೋಟಿ ರೂ. ಮತ್ತು 450 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿರುವ ಎರಡನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಐಶ್ವರ್ಯಾ ಗೌಡ ದಂಪತಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ಹೈಕೋರ್ಟ್ ಐಶ್ವರ್ಯಾ ಮತ್ತು ಆಕೆಯ ಪತಿ ಕೆ.ಎನ್. ಹರೀಶ್ ಬಿಡುಗಡೆಗೆ ಇತ್ತಿಚೇಗೆ ಆದೇಶಿಸಿತ್ತು. ಬೆಂಗಳೂರಿನ ರಾಜರಾಜೇಶ್ವರಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಸಂಬಂಧ ಬಂಧಿಸಿರುವುದನ್ನು ಪ್ರಶ್ನಿಸಿ ಐಶ್ವರ್ಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿ ಇದೇ ಪ್ರಕಾರವಾದ ಆರೋಪದಲ್ಲಿ ಐಶ್ವರ್ಯಾ ಅವರ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿದೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಐಶ್ವರ್ಯಾರನ್ನು ವಿಚಾರಣೆಗೆ ಕರೆದಿರುವ ಪೊಲೀಸರು ಏಕಾಏಕಿ ಬಂಧಿಸಿದ್ದಾರೆ.
ಆಕೆಗೆ ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ನೀಡಿಲ್ಲ. ಇದು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾದ ಕ್ರಮ. ಈ ಹಿಂದಿನ ಪ್ರಕರಣದಲ್ಲಿ ಮಾಡಿರುವ ಆದೇಶವನ್ನು ಇದಕ್ಕೆ ಅನ್ವಯಿಸಬಹುದು. ಪೊಲೀಸರು ತನಿಖೆ ಮುಂದುವರಿಸಲಿ ಎಂದರು.
ಇದಕ್ಕೆ ಸರ್ಕಾರದ ವಕೀಲರು ಆಕ್ಷೇಪಿಸಿದರು. ಆಗ ಪೀಠವು ಆಕೆ ಏಕೆ ಜೈಲಿನಲ್ಲಿರಬೇಕು? ಅಗತ್ಯವಿಲ್ಲ ಎಂದು ಹೇಳಿತು.
ಅಂತೆಯೇ, ಅರ್ಜಿದಾರೆ ಐಶ್ವರ್ಯಾಗೌಡ ಮನೆಯಲ್ಲಿ ಪೊಲೀಸರು ಕಾನೂನಿನ ಅನ್ವಯ ತನಿಖೆ, ಶೋಧ ಮತ್ತು ಜಫ್ತಿ ಮುಂದುವರಿಸಬಹುದಾಗಿದೆ. ಐಶ್ವರ್ಯಾ ಗೌಡ ಅವರು ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷಿ ತಿರುಚುವುದು ಅಥವಾ ನಾಶಪಡಿಸಬಾರದು ಎಂದು ಆದೇಶಿಸಿರುವ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ದೂರುದಾರೆ ಶಿಲ್ಪಾಗೌಡ ಅವರಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಫೆ. 27ಕ್ಕೆ ಮುಂದೂಡಿದೆ.