ನಿರಂಜನ್​ಗೆ ಝಾರಾ ಜೋಡಿ; ಶೀಘ್ರದಲ್ಲಿ ಶೂಟಿಂಗ್ ಶುರು

Ullasa Superstar
Published on

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸ್ಯಾಂಡಲ್​ವುಡ್​ಗೆ ‘ಸೂಪರ್​ಸ್ಟಾರ್’ ಸಿನಿಮಾ ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅದ್ದೂರಿ ಮುಹೂರ್ತ ಮುಗಿದಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದ್ದು, ಅದಕ್ಕೂ ಮುನ್ನ ನಾಯಕಿಯ ಆಯ್ಕೆ ಆಗಿದೆ. ಬಾಲಿವುಡ್​ನಿಂದ ನಟಿಯೊಬ್ಬರನ್ನು ಕರೆತರುವ ಬಗ್ಗೆ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಇದೀಗ ಬಿ- ಟೌನ್ ಬ್ಯೂಟಿಯನ್ನು ಕನ್ನಡಕ್ಕೆ ಪರಿಚಯಿಸುತ್ತಿದ್ದಾರೆ ನಿರ್ದೇಶಕರು.

ರಮೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ‘ಸೂಪರ್​ಸ್ಟಾರ್’ ಸಿನಿಮಾದಲ್ಲಿ ನಿರಂಜನ್​ಗೆ ಝಾರಾ ಯಾಸ್ಮಿನ್ ನಾಯಕಿಯಾಗಲಿದ್ದಾರೆ. ಬಾಲಿವುಡ್​ನಲ್ಲಿ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು, ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಝಾರಾಗೆ ಇದು ಮೊದಲ ಸಿನಿಮಾ. ಬಾಲಿವುಡ್​ನಲ್ಲಿ ಖಾತೆ ತೆರೆಯುವುದಕ್ಕೂ ಮುನ್ನ ಸ್ಯಾಂಡಲ್​ವುಡ್​ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.

ನಾಯಕಿಯ ಆಯ್ಕೆಯ ಬಗ್ಗೆ ಮಾತನಾಡುವ ನಿರ್ದೇಶಕ ರಮೇಶ್​ಕುಮಾರ್, ‘ಈ ಚಿತ್ರದಲ್ಲಿ ನಾಯಕಿಯ ಪಾತ್ರ ಬಹುಮುಖ್ಯವಾದದ್ದು. ಅದರಲ್ಲೂ ಡಾನ್ಸ್ ಹಿನ್ನೆಲೆಯಿರುವ ನಟಿಯೇ ನಮಗೆ ಬೇಕಾಗಿದ್ದರು. ಇದರ ಜತೆಗೆ ನಿರಂಜನ್ ಆರಡಿ ಇರುವುದರಿಂದ ಅವರಿಗೆ ಸರಿಸಮ ಎನಿಸುವ ನಟಿಯ ಹುಡುಕಾಟದಲ್ಲಿದ್ದೆವು. ಅದರಂತೆ ಬಾಲಿವುಡ್​ನ ಝಾರಾ ಸಿಕ್ಕಿದ್ದಾರೆ. ಹಲವು ಆಲ್ಬ ಹಾಡುಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಜನವರಿಯಿಂದ ಮಂಗಳೂರಿನಲ್ಲಿ ಶೂಟಿಂಗ್ ಶುರುವಾಗಲಿದ್ದು, 60 ದಿನಗಳ ಕಾಲ್​ಶೀಟ್ ನೀಡಿದ್ದಾರೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net