ಕರೊನಾ ಮಧ್ಯೆಯೂ ಮದ್ಯದಿಂದ ಸರ್ಕಾರಕ್ಕೆ ಭರ್ಜರಿ ಆದಾಯ; ಏ.1ರಿಂದ ಡಿ.31ರವರೆಗೆ 16,405 ಕೋಟಿ ರೂ. ವಹಿವಾಟು

wineshop
Published on

ಬೆಂಗಳೂರು: ಕರೊನಾ ಸಂಕಷ್ಟದಲ್ಲಿಯೂ ಅಬಕಾರಿ ಇಲಾಖೆಗೆ ಮದ್ಯ ಮಾರಾಟದಿಂದ ಈ ವರ್ಷದಲ್ಲಿ ಭರ್ಜರಿ ಆದಾಯ ಬಂದಿದೆ. 2019ರ ಏ.1ರಿಂದ ಡಿ.31ರವರೆಗೆ ಮದ್ಯ ಮಾರಾಟದಿಂದ 16,218 ಕೋಟಿ ರೂ.ಆದಾಯ ಬಂದರೆ, 2020ರ ಏ.1ರಿಂದ ಡಿ.31ರವರೆಗೆ 16,405 ಕೋಟಿ ರೂ.ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಆದಾಯದಲ್ಲಿ 187 ಕೋಟಿ ರೂ. ಮುಂದಿದೆ. ಕರೊನಾ ನಿಯಂತ್ರಿಸುವ ಸಲುವಾಗಿ ಏಪ್ರಿಲ್ ಪೂರ್ತಿ ತಿಂಗಳು ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು. ಇದರಿಂದ ಅಂದಾಜು 2 ಸಾವಿರ ಕೋಟಿ ರೂ.ಆದಾಯ ಖೋತಾವಾಗಿತ್ತು. ಆದರೆ, ಲಾಕ್‌ಡೌನ್ ತೆರವು ಬಳಿಕ ಮದ್ಯ ಮಾರಾಟದಲ್ಲಿ ಇಲಾಖೆಗೆ ಭರ್ಜರಿ ಆದಾಯವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2020ರ ತಿಂಗಳುವಾರು ಮಾಹಿತಿ: ಏಪ್ರಿಲ್‌ನಲ್ಲಿ 1.06 ಕೋಟಿ ರೂ., ಮೇನಲ್ಲಿ 1,403.02 ಕೋಟಿರೂ., ಜೂನ್‌ನಲ್ಲಿ 2,427.09 ಕೋಟಿ ರೂ., ಜುಲೈನಲ್ಲಿ 2,032.84 ಕೋಟಿ ರೂ., ಆಗಸ್ಟ್‌ನಲ್ಲಿ 1,891.39 ಕೋಟಿ ರೂ., ಸೆಪ್ಟೆಂಬರ್‌ನಲ್ಲಿ 2,010.23 ಕೋಟಿ ರೂ., ಅಕ್ಟೋಬರ್‌ನಲ್ಲಿ 2,197.20 ಕೋಟಿ ರೂ., ನವೆಂಬರ್‌ನಲ್ಲಿ 2,006.74 ಕೋಟಿ ರೂ. ಹಾಗೂ ಡಿಸೆಂಬರ್‌ನಲ್ಲಿ 2,436.34 ಕೋಟಿ ರೂ.ಆದಾಯ ಬಂದಿದ್ದು, ಒಟ್ಟಾರೆ ಮದ್ಯ ಮಾರಾಟದಲ್ಲಿ ಶೇ.1.16 ಬೆಳವಣಿಗೆಯಾಗಿದೆ.

ಬೆಂಗಳೂರಲ್ಲೇ 48.28 ಕೋಟಿ ರೂ ವಹಿವಾಟು: ಹೊಸ ವರ್ಷ ಹಿನ್ನೆಲೆಯಲ್ಲಿ ಡಿ.31ರಂದು ಬೆಂಗಳೂರಿನಲ್ಲಿ ಬರೋಬ್ಬರಿ ಮದ್ಯ ಮಾರಾಟದಿಂದ ಇಲಾಖೆಗೆ, 48.28 ಕೋಟಿ ರೂ.ಆದಾಯ ಬಂದಿದೆ. 56 ಸಾವಿರ ಬಾಕ್ಸ್ ಐಎಂಎಲ್ ಲಿಕ್ಕರ್ ಹಾಗೂ 50 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗಿದೆ. ಒಟ್ಟಾರೆ 2020ರ ಡಿ.31ರಂದು ರಾಜ್ಯಾದ್ಯಂತ 120.21 ಕೋಟಿ ರೂ. ಮೌಲ್ಯದ 2.23 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 30.73 ಕೋಟಿ ರೂ.ಮೌಲ್ಯದ 1.73 ಲಕ್ಷ ಬಾಕ್ಸ್ ಬಿಯರ್ ಸೇರಿ ಒಟ್ಟು 150.94 ಕೋಟಿ ರೂ.ಮೌಲ್ಯದ ಮದ್ಯ ಮಾರಾಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net