ರೋಹಿತ್, ವಿರಾಟ್ ಹಾದಿ ಹಿಡಿಯಲಿದ್ದಾರಾ ಜಸ್ಪ್ರೀತ್​? ಟಿ20ಐ ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಬುಮ್ರಾ

ವಿಜಯವಾಣಿ - 2024-07-05T144430.142
Published on

ನವದೆಹಲಿ: ನಿನ್ನೆ (ಜು.04) ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಭಾರತಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಿಸಿಸಿಐ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ವಿಶ್ವಕಪ್ ವೀರರಿಗೆ 125 ಕೋಟಿ ರೂ. ಬಹುಮಾನ ನೀಡಿ, ವಿಶೇಷವಾಗಿ ಸನ್ಮಾನಿಸಲಾಯಿತು. ಬಾರ್ಬಡೋಸ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 7 ರನ್​ಗಳ ಅಂತರದಿಂದ ಎದುರಾಳಿಯನ್ನು ಮಣಿಸಿ, 17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಟೀಮ್ ಇಂಡಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.

ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಭಾರತ ತಂಡದ ನಾಯಕ ರೋಹಿತ್ ಶರ್ಮ, 'ರನ್ ಮಷಿನ್' ವಿರಾಟ್ ಕೊಹ್ಲಿ ಮತ್ತು ಆಲ್​ರೌಂಡರ್ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಫಾರ್ಮೆಟ್​ಗೆ ನಿವೃತ್ತಿ ಘೋಷಿಸಿದರು. ಒಂದೆಡೆ ಐತಿಹಾಸಿಕವಾಗಿ ವಿಶ್ವಕಪ್​ ಗೆದ್ದ ಭಾರತ ತಂಡವನ್ನು ಕಂಡು ಸಂತಸ ಪಡುವುದೋ ಅಥವಾ ನೆಚ್ಚಿನ ಸ್ಟಾರ್​ ಕ್ರಿಕೆಟಿಗರು ನಿವೃತ್ತಿ ಘೋಷಿಸಿದರು ಎಂದು ಬೇಸರಕ್ಕೆ ಶರಣಾಗುವುದೋ ತಿಳಿಯದೆ ಕ್ರಿಕೆಟ್ ಅಭಿಮಾನಿಗಳು ಕಂಗಾಲಾಗಿದ್ದರು. ಆದ್ರೆ, ಇದೀಗ ಜಗತ್ತಿನ ಶ್ರೇಷ್ಠ ಬೌಲರ್ ಎಂದೇ ಗುರುತಿಸಿಕೊಂಡಿರುವ ಟೀಮ್ ಇಂಡಿಯಾದ ಜಸ್ಪ್ರೀತ್ ಬುಮ್ರಾ ನಿವೃತ್ತಿ ವದಂತಿ ಅಭಿಮಾನಿಗಳನ್ನು ಮತ್ತಷ್ಟು ಗೊಂದಲಕ್ಕೆ ದೂಡಿತು.

ಈ ಕುರಿತಂತೆ ನಿನ್ನೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬುಮ್ರಾ, "ಸದ್ಯಕ್ಕೆ ನಿವೃತ್ತಿ ಪಡೆಯುತ್ತಿಲ್ಲ. ನಾನು ಈಗಷ್ಟೇ ಪ್ರಾರಂಭಿಸಿದ್ದೇನೆ, ಮತ್ತು ಭವಿಷ್ಯದಲ್ಲಿ ಈ ಪ್ರಶ್ನೆಯಿಂದ ಬಹಳ ದೂರ ಉಳಿಯಲು ಬಯಸುತ್ತೇನೆ" ಎಂದು ಹೇಳಿದರು. ಬುಮ್ರಾ ಮಾತನ್ನು ಆಲಿಸುತ್ತಿದ್ದಂತೆ ಅಭಿಮಾನಿಗಳು ಸಂತಸ ಹೊರಹಾಕಿದ್ದು, ನೀವು ಟೀಮ್ ಇಂಡಿಯಾದ ಬಲಿಷ್ಠ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net