ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಪ್ರದೇಶ ಕಾಡಾನೆ ಹಾಡಹಗಲೇ ಸಂಚರಿಸಿದೆ. ಕಲ್ಲಾಜೆ ಹೊಳೆಗೆ ಇಳಿದ ಕಾಡಾನೆ ಹೊಳೆಯಲ್ಲಿ ಸಂಚರಿಸಿ ಮರಕತ ದೇವಸ್ಥಾನ ಮುಂಭಾಗದ ರಸ್ತೆ ಮೂಲಕ ಯೇನೆಕಲ್ಲು ಗ್ರಾಮದ ಅರಂಪಾಡಿ ಭಾಗದಲ್ಲಿ ಸಂಚರಿಸಿದೆ. ಬಳಿಕ ರಾತ್ರಿ ವೇಳೆ ಯೇನೆಕಲ್ಲು ಶಾಲಾ ಮೈದಾನದಲ್ಲಿ ಸಾಗುತ್ತಿರುವುದನ್ನು ಸ್ಥಳೀಯರು ಗಮನಿಸಿ ವಿಡಿಯೋ ಸೆರೆ ಹಿಡಿದಿದ್ದಾರೆ. ನಂತರ ಆನೆ ಅರಣ್ಯದತ್ತ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆ ಯಾವುದೇ ಹಾನಿ ಮಾಡಿಲ್ಲ.
ಮಾಲಾಧಾರಿಗಳಿಗೆ ಎದುರಾದ ಕಾಡಾನೆ
ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಮತ್ತು ವಾಹನ ಚಾಲಕರಿಗೆ ಕಾಡಾನೆ ಎದುರುಗೊಂಡ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ರೈಲು ನಿಲ್ದಾಣಕ್ಕೆ ತೆರಳುತ್ತಿದ್ದ ಸುಂಕದಕಟ್ಟೆ ಮೂಜೂರಿನ ವಾಹನ ಚಾಲಕರೊಬ್ಬರಿಗೆ ಕಾಡಾನೆ ಎದುರುಗೊಂಡಿದೆ. ಓಟಕಜೆ ಭಾಗದ ಕಾಲನಿಯೊಂದರಲ್ಲಿ ಅಯ್ಯಪ್ಪ ಮಾಲೆಧಾರಿಗಳಿಗೂ ಕಾಡಾನೆ ಕಾಣಸಿಕ್ಕಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಏನೆಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ರೀಡೋತ್ಸವ, ವಾರ್ಷಿಕೋತ್ಸವ ಹಿನ್ನೆಲೆ ಪೂರ್ವ ತಯಾರಿ ಮಾಡುತ್ತಿದ್ದ ಸಂದರ್ಭ 8 ಗಂಟೆ ಹೊತ್ತಿಗೆ ಶಾಲಾ ಮೈದಾನದ ಮೂಲಕ ಹಾದು ಹೋಗಿತ್ತು. ಇದೇ ಕಾಡಾನೆ ಐತ್ತೂರು ಭಾಗದತ್ತ ಆಗಮಿಸಿದೆ ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ. ಐತ್ತೂರು, ಸುಬ್ರಹ್ಮಣ್ಯ ಸೇರಿದಂತೆ ಕಾಡಂಚಿನ ಪ್ರದೇಶದಲ್ಲಿ ಕಾಡಾನೆ ಸಂಚಾರದ ಸುದ್ದಿ ನಿತ್ಯವೂ ಕೇಳಿ ಬರುತ್ತಿದೆ.