ಕೋಲ್ಕತ್ತಾದಲ್ಲಿ ತಡರಾತ್ರಿ ಧಾರಾಕಾರ ಮಳೆ, ರಸ್ತೆಗಳು ಜಲಾವೃತ: ಐವರು ಸಾವು, ಶಾಲೆಗಳಿಗೆ ರಜೆ ಘೋಷಣೆ| Heavy Rain

Untitled design (83)
Published on

Heavy Rain: ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಅದರ ಉಪನಗರಗಳಲ್ಲಿ ಸೋಮವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ರಸ್ತೆಗಳು ಜಲಾವೃತವಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಯಿಂದ ನಗರದ ಬೇರೆ ಬೇರೆ ಕಡೆ ಐವರು ಸಾವನ್ನಪ್ಪಿದ್ದಾರೆ ಎಂದು ಮಂಗಳವಾರ (ಸೆ. 23) ವರದಿಯಾಗಿದೆ.

ಕೋಲ್ಕತ್ತಾದ ಬೆನಿಯಾಪುಕುರ್, ಕಾಳಿಕಾಪುರ್, ನೇತಾಜಿ ನಗರ, ಗರಿಯಾಹತ್ ಮತ್ತು ಎಕ್ಬಾಲ್ಪುರ್‌ನಲ್ಲಿ ತಲಾ ಒಬೊಬ್ಬರು ಸಾವನ್ನಪ್ಪಿದ್ದಾರೆ. ನೀರಿನ ಹರಿವು ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ. ಉಪನಗರ ರೈಲು ಮತ್ತು ಮೆಟ್ರೋ ಸಂಚಾರ ಸ್ಥಗಿತಗೊಂಡಿವೆ. ಹಲವಾರು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ನಗರದಾದ್ಯಂತ ಇರುವ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನ ಮಾಹಿತಿಯ ಪ್ರಕಾರ, ಗರಿಯಾ ಕಾಮದಹರಿಯಲ್ಲಿ ಕೆಲವು ಗಂಟೆಗಳಲ್ಲಿ 332 ಮಿಮೀ ಮಳೆಯಾಗಿದ್ದು, ಜೋಧ್‌ಪುರ ಪಾರ್ಕ್‌ನಲ್ಲಿ 285 ಮಿಮೀ, ಕಾಳಿಘಾಟ್‌ನಲ್ಲಿ 280 ಮಿಮೀ, ಟಾಪ್ಸಿಯಾದಲ್ಲಿ 275 ಮಿಮೀ ಮತ್ತು ಬ್ಯಾಲಿಗಂಗೆಯಲ್ಲಿ 264 ಮಿಮೀ ಮಳೆಯಾಗಿದೆ.

ವಾರ್ಷಿಕ ದುರ್ಗಾ ಪೂಜೆಗೆ ಕೆಲವು ದಿನಗಳ ಮೊದಲು ನಗರದಲ್ಲಿ ಭಾರೀ ಮಳೆಯಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ವಿಮಾನಗಳ ರನ್​ವೇ ಗಳಲ್ಲಿ ನೀರು ತುಂಬಿದೆ. ಈ ಹಿನ್ನೆಲೆ ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳು ವಿಳಂಬವಾಗಬಹುದು ಎಂದು ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡಿವೆ.

ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಏರ್​ ಇಂಡಿಯಾ, ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು https://airindia.com/in/en/manage/flight-status.html ನಲ್ಲಿ ನಿಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಿ ಮತ್ತು ಸಂಚಾರ ಮತ್ತು ನೀರಿನ ಅಡಚಣೆಯಿಂದಾಗಿ ನಿಮ್ಮ ಪ್ರಯಾಣಕ್ಕೆ ಹೆಚ್ಚುವರಿ ಸಮಯವನ್ನು ನೀಡಿ ಎಂದು ತಿಳಿಸಿದೆ. ಇಂಡಿಗೋ ಸಹ ಇದೇ ರೀತಿಯ ಮಾಹಿತಿಯನ್ನು ಪ್ರಕಟಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net