

Himachal Pradesh: ಹಿಮಾಚಲ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೋಡ ಸ್ಫೋಟ, ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ರಾಜ್ಯಾದ್ಯಂತ 362 ರಸ್ತೆಗಳು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳನ್ನು ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (SEOC) ಪ್ರಕಾರ, ಮಂಡಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, 220 ರಸ್ತೆಗಳು ಮುಚ್ಚಲ್ಪಟ್ಟಿವೆ. ನೆರೆಯ ಕುಲ್ಲು ಜಿಲ್ಲೆಯಲ್ಲಿ 91 ರಸ್ತೆಗಳು ಮುಚ್ಚಿಹೋಗಿವೆ ಎಂದು SEOC ತಿಳಿಸಿದೆ.
ಹಿಮಾಚಲದಲ್ಲಿ ಭಾನುವಾರ (ಆಗಸ್ಟ್10) ಯೆಲ್ಲೋ ಅಲರ್ಟ್ ನೀಡಿದ್ದು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಸೋಮವಾರದಿಂದ ಬುಧವಾರದವರೆಗೆ ಅರೇಂಜ್ ಅಲರ್ಟ್ ನೀಡಲಾಗಿದ್ದು, ಎರಡರಿಂದ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಈವರೆಗೆ 112 ಜನರು ಸಾವನ್ನಪ್ಪಿದ್ದಾರೆ ಮತ್ತು 37 ಜನರು ಕಾಣೆಯಾಗಿದ್ದಾರೆ ಎಂದು ಎಸ್‌ಇಒಸಿ ವರದಿ ಮಾಡಿದೆ. ವಿವಿಧ ಜಿಲ್ಲೆಗಳಲ್ಲಿ 704 ವಿದ್ಯುತ್ ಪರಿವರ್ತಕಗಳು ಮತ್ತು 178 ನೀರು ಸರಬರಾಜು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿವೆ. ಮಳೆಯಿಂದ ಸಾರ್ವಜನಿಕ ಮೂಲಸೌಕರ್ಯಗಳು ಅಸ್ತವ್ಯಸ್ತವಾಗಿದೆ.
ಜೂನ್ 20 ರಂದು ಮಾನ್ಸೂನ್ ಆಗಮನದ ನಂತರ, ರಾಜ್ಯವು 1,988 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ. ಈ ಅವಧಿಯಲ್ಲಿ, ಹಿಮಾಚಲ ಪ್ರದೇಶವು 58 ದಿಢೀರ್ ಪ್ರವಾಹಗಳು, 30 ಮೇಘಸ್ಫೋಟಗಳು ಮತ್ತು 53 ಪ್ರಮುಖ ಭೂಕುಸಿತಗಳನ್ನು ಕಂಡಿದೆ.(ಏಜೆನ್ಸೀಸ್)