

ನವದೆಹಲಿ: ಭಾರೀ ಮಳೆ ಹಾಗೂ ಬಿರುಗಾಳಿಗೆ ರಾಷ್ಟ್ರ ರಾಜಧಾನಿ ಜನತೆ ಬೆಚ್ಚಿಬಿದ್ದಿದ್ದಾರೆ. ಹಲವು ದಿನಗಳ ಬಳಿಕ ಸುರಿದ ಮಳೆಯಿಂದ ಜನರು ನಿರಾಳರಾಗಿದ್ದರೂ, ಮಳೆಯ ಆರ್ಭಟಕ್ಕೆ ಗಾಬರಿಯಾಗಿದ್ದಾರೆ.
ಸೋಮವಾರ ಏಕಾಏಕಿ ಸುರಿದ ಮಳೆಯಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ, ಕಾರುಗಳೇ ಅಲುಗಾಡಿದ ಭೀಕರ ದೃಶ್ಯಗಳನ್ನು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಈ ನಡುವೆ ಕೆಲ ವಿಮಾನದ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಇಂಡಿಗೋ ಸಂಸ್ಥೆ ತನ್ನ ಪ್ರಯಾಣಿಕರಿಗೆ ಟ್ವೀಟ್ ಮೂಲಕ ತಿಳಿಸಿದೆ.
ಕಳೆದ ಕೆಲ ದಿನಗಳಿಂದ ಕಾದ ಕೆಂಡದಂತಿದ್ದ ದಿಲ್ಲಿ, ವರುಣನ ಕೃಪೆಯಿಂದ ಈಗ ತಣ್ಣಗಾಗಿದೆ. ಆದರೆ ಹೀಗೆ ಬಂದು ಹಾಗೆ ಹೋದ ಮಳೆರಾಯ ಮಾಡಿದ ಅವಾಂತರ ಕಡಿಮೇಯೇನಿಲ್ಲ. ಹಲವೆಡೆ ಮರಗಿಡಗಳು ಉರುಳಿಬಿದ್ದಿದ್ದರು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಸಂಜೆ 4-30ರ ಸಮಯಕ್ಕೆ ಪ್ರಾರಂಭವಾದ ಮಳೆ ಕೆಲವೇ ನಿಮಿಷಗಳಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿಬಿಟ್ಟಿತು. (ಏಜೆನ್ಸೀಸ್)