ಆರ್​ಸಿಬಿ ಗೆದ್ದ ಬಳಿಕ ಶೇಕ್​ ಹ್ಯಾಂಡ್​ ಮಾಡದೆ ಹೊರಟ ಧೋನಿ! ಈ ವೇಳೆ ಕೊಹ್ಲಿ ಏನ್​ ಮಾಡಿದ್ರೂ ನೋಡಿ…

Kohli Dhoni
Published on

ಬೆಂಗಳೂರು: ನಿನ್ನೆ (ಮೇ 18) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಪ್ಲೇಆಫ್​ ಪ್ರವೇಶಿಸಿರುವುದು ಎಲ್ಲರಿಗೂ ತಿಳಿದಿದೆ. ಈ ಪಂದ್ಯದಲ್ಲಿ ಚೇಸಿಂಗ್​ ವೇಳೆ ಆಕ್ರಮಣಕಾರಿ ಆಟವಾಡಿದ ಎಂ.ಎಸ್​. ಧೋನಿ ಒಂದು ಹಂತದಲ್ಲಿ ಪಂದ್ಯ ದಿಕ್ಕನ್ನು ಬದಲಿಸಿದ್ದರು. ಇನ್ನೇನು ಆರ್​ಸಿಬಿ ಪ್ಲೇಆಫ್​ ಕನಸನ್ನು ನುಚ್ಚು ನೂರು ಮಾಡಬೇಕು ಅನ್ನುವಷ್ಟರಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಕೇವಲ 13 ಎಸೆತಗಳಲ್ಲಿ 25 ರನ್ ಗಳಿಸಿದರು. ಆದರೆ, ಕೊನೆಗೂ ವಿಜಯಲಕ್ಷ್ಮೀ ಆರ್​ಸಿಬಿ ಕಡೆ ಒಲಿಯಿತು.

ಇನ್ನು ಈ ಪಂದ್ಯದ ಬಳಿಕ ನಡೆದ ಘಟನೆ ಕ್ರೀಡಾಭಿಮಾನಿಗಳಲ್ಲಿ ಬೇಸರ ಹುಟ್ಟಿಸುವುದಂತೂ ನಿಜ. ಯಾರೇ ಪಂದ್ಯ ಗೆಲ್ಲಲಿ ಕೊನೆಯಲ್ಲಿ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವುದು ಸಾಮಾನ್ಯ. ಆದರೆ, ನಿನ್ನೆ ನಡೆದಿದ್ದೇ ಬೇರೆ. ಪಂದ್ಯದ ನಂತರ ಇನ್ನೇನು ಆಟಗಾರರು ಸಾಲಿನಲ್ಲಿ ನಿಂತು ಶೇಕ್​ ಹ್ಯಾಂಡ್​ ಮಾಡಬೇಕಿತ್ತು. ಆದರೆ, ಧೋನಿ ಅಲ್ಲಿಂದ ಸೀದಾ ಡ್ರೆಸ್ಸಿಂಗ್​ ರೂಮ್​ಗೆ ಹೊರಟರು. ಈ ವೇಳೆ ಎದುರಾದ ಆರ್​ಸಿಬಿಯ ಬೆಂಬಲ ಸಿಬ್ಬಂದಿ ಹಾಗೂ ಕೆಲವೇ ಆಟಗಾರರಿಗೆ ಶೇಕ್​ ಹ್ಯಾಂಡ್​ ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಧೋನಿ ವಿರುದ್ಧ ಅನೇಕರು ಅಸಮಧಾನ ಹೊರಹಾಕುತ್ತಿದ್ದಾರೆ. ಇಲ್ಲಿ ಧೋನಿ ಅವರು ಕ್ರೀಡಾಸ್ಫೂರ್ತಿ ಮೆರೆಯಬೇಕಿತ್ತು. ದಿಗ್ಗಜ ಆಟಗಾರ ಈ ರೀತಿ ನಡೆದುಕೊಳ್ಳುತ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಆದರೆ, ಇದೇ ಸಂದರ್ಭದಲ್ಲಿ ಕೊಹ್ಲಿ ತೋರಿದ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಧೋನಿ ಇಲ್ಲದಿರುವುದನ್ನು ಗಮನಿಸಿದ ಕೊಹ್ಲಿ, ನೇರವಾಗಿ ಧೋನಿ ಅವರಿದ್ದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ಹಸ್ತಲಾಘವ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೊಹ್ಲಿಯಂತೆ ಧೋನಿ ಕೂಡ ಕ್ರೀಡಾಸ್ಫೂರ್ತಿ ಮೆರಯಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಏನೇ ಇರಲಿ ಅಲ್ಲಿ ಏನು ನಡೆದಿದೆ ಎಂಬುದು ಧೋನಿಗೆ ಮಾತ್ರ ಗೊತ್ತಿರುತ್ತದೆ.

ಇನ್ನು ಧೋನಿ ಅವರು ಔಟಾಗಿ ಡಗೌಟ್​ಗೆ ಹಿಂದಿರುಗಿದ ಸಂದರ್ಭದಲ್ಲಿ ಆರ್​ಸಿಬಿ ಆಟಗಾರರು ಧೋನಿಗೆ ಶೇಕ್​ ಹ್ಯಾಂಡ್​ ಮಾಡಬೇಕಿತ್ತು ಎಂಬ ವಾದವೂ ಇದೆ. ಇದು ಧೋನಿ ಅವರ ಕೊನೆಯ ಐಪಿಎಲ್​ ಟೂರ್ನಿ ಎಂದೇ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ಧೋನಿ ಸಹ ಸುಳಿವು ನೀಡಿದ್ದಾರೆ. ಟೂರ್ನಿಯ ಆರಂಭದಲ್ಲಾದ ನಾಯಕತ್ವ ಬದಲಾವಣೆಯೇ ಇದಕ್ಕೆ ಉದಾಹರಣೆ. ಕೊನೆಯ ಟೂರ್ನಿಯಾದ್ದರಿಂದ ಆರ್​ಸಿಬಿ ಆಟಗಾರರು ಧೋನಿ ಅವರನ್ನು ಅಭಿನಂದಿಸಬೇಕಿತ್ತು ಎಂದು ಕೆಲ ಹಿರಿಯ ಕ್ರಿಕೆಟಿಗರು ವಾದ ಮಂಡಿಸುತ್ತಿದ್ದಾರೆ.

ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಫಾಫ್​ ಡುಪ್ಲೆಸಿಸ್ ಪಡೆ ನಿಗದಿತ 20 ಓವರ್​ಗಳನ್ನು ಆಡಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಲು ವಿಫಲವಾದ ಸಿಎಸ್​ಕೆ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ರುತುರಾಜ್ ಪಡೆ ಲೀಗ್​ ಹಂತದಲ್ಲೇ ನಿರ್ಗಮಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಿದೆ.

ಕೊನೆಯ ಹಂತದಲ್ಲಿ ಮಹೇಂದ್ರ ಸಿಂಗ್​ ಧೋನಿ ಅವರು ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಆರ್​ಸಿಬಿ ಪಾಳಯದಲ್ಲಿ ನಡುಕು ಹುಟ್ಟಿಸಿದರು. ಆರ್​ಸಿಬಿ ಪ್ಲೇಆಫ್​ಗೆ ಏರುವುದನ್ನು ತಪ್ಪಿಸಲು ಕೊನೆಯ ಒಂದು ಓವರ್​ನಲ್ಲಿ 17 ರನ್​ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಕ್ರೀಸ್​ನಲ್ಲಿದ್ದರು. ಯಶ್​ ದಯಾಳ್​ ಎಸೆದ ಮೊದಲ ಎಸೆತದಲ್ಲಿ 110 ಮೀಟರ್​ ಉದ್ದದ ಟೂರ್ನಿಯ ಅತ್ಯಂತ ಉದ್ದದ ಸಿಕ್ಸರ್​ ಸಿಡಿಸುವ ಮೂಲಕ ಆರ್​ಸಿಬಿ ಪರ ಇದ್ದ ಪ್ಲೇಆಫ್​ ವಿಜಯಲಕ್ಷ್ಮೀಯನ್ನು ಚೆನ್ನೈ ಕಡೆ ತಿರುಗಿಸಿದರು. ಸಿಕ್ಸರ್​ ಬಳಿಕ 5 ಎಸೆತಗಳಲ್ಲಿ ಕೇವಲ 11 ರನ್​ ಬೇಕಿತ್ತು. ಇದರಿಂದ ಆರ್​ಸಿಬಿ ಮೇಲೆ ಹೆಚ್ಚಿನ ಒತ್ತಡವೂ ಇತ್ತು. ಆದರೆ, ದಯಾಳ್​ ಅವರ ಎರಡನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಈ ಚೆಂಡು ಕೂಡ ಸಿಕ್ಸರ್​ ಹೋಗುತ್ತದೆ ಅಂದುಕೊಂಡಿದ್ದರು. ಆದರೆ, ತುಂಬಾ ಎತ್ತರಕ್ಕೆ ಹೋಗಿದ್ದ ಚೆಂಡನ್ನು ಬೌಂಡರಿ ಗೆರೆಯಲ್ಲಿ ನಿಂತಿದ್ದ ಸ್ವಪ್ನಿಲ್​ ಸಿಂಗ್​ ತುಂಬಾ ಸುಲಭವಾಗಿ ಹಿಡಿದರು. ಈ ಕ್ಯಾಚ್​ ಹಿಡಿದಿದ್ದು ತಂಡದ ಗತಿಯನ್ನೇ ಬದಲಿಸಿತು. ಕೊನೆಯಲ್ಲಿ 4 ಎಸೆತಕ್ಕೆ 11 ರನ್​ ಬೇಕಿದ್ದಾಗ ಶಾರ್ದುಲ್​ ಠಾಕೂರ್​ ಕ್ರೀಸ್​ನಲ್ಲಿದ್ದರು. ಆದರೆ, ದಯಾಳ್​ 3ನೇ ಎಸೆತವನ್ನು ಡಾಟ್​ ಬಾಲ್​ ಮಾಡಿದರು. 4 ಎಸೆತದಲ್ಲಿ ಒಂದು ರನ್​ ನೀಡಿದರು. ಕೊನೆಯ 2 ಬಾಲ್​ನಲ್ಲಿ 10 ರನ್​ ಬೇಕಿದ್ದಾಗ ಅಪಾಯಕಾರಿ ಜಡೇಜಾ ಕ್ರೀಸ್​ನಲ್ಲಿದ್ದರು. ಆದರೆ, 5ನೇ ಎಸೆತವನ್ನು ದಯಾಳ್​ ಡಾಟ್​ ಬಾಲ್​ ಮಾಡಿದರು. ಅಲ್ಲಿಗೆ ಆರ್​ಸಿಬಿ ಪಾಳಯದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ಕೊನೆಯ ಎಸೆತವನ್ನು ದಯಾಳ್ ಮತ್ತೆ​ ಡಾಟ್​ ಬಾಲ್​ ಮಾಡಿದರು. ಅಲ್ಲಿಗೆ ಆರ್​ಸಿಬಿ ಪ್ಲೇಆಫ್​ ಪ್ರವೇಶ ಖಚಿತವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net