ಕರೊನಾ ಲಸಿಕೆ ಕಂಡುಹಿಡಿಯಲು ಆರೋಗ್ಯವಂತರು ತಮ್ಮ ಪ್ರಾಣ ಪಣಕ್ಕಿಡಲೇಬೇಕು!

Coronavirus
Published on

ಮೆಸಾಚುಸೆಟ್ಸ್: ಮಹಾಮಾರಿ ಕರೊನಾ ವೈರಸ್​ಗೆ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಗೆ ವೇಗ ನೀಡಲು ಸ್ವಯಂಪ್ರೇರಿತರು ಉದ್ದೇಶಪೂರ್ವವಾಗಿ ವೈರಸ್​ ಅನ್ನು ತಗುಲಿಸಿಕೊಳ್ಳಬೇಕೆಂದು ವಿಜ್ಞಾನಿಗಳು ಪ್ರಸ್ತಾವನೆಯನ್ನು ಮುಂದಿಟ್ಟದ್ದು ಈಗ ವಿವಾದಕ್ಕೀಡಾಗಿದೆ.

ಅಮೆರಿಕದ ಮೆಸಾಚುಸೆಟ್ಸ್​ನ ಹಾರ್ವರ್ಡ್​ ಯೂನಿವರ್ಸಿಟಿ ನೇತೃತ್ವದ ವಿಜ್ಞಾನಿಗಳು ಈ ವಾದವನ್ನು ಮುಂದಿಟ್ಟಿದ್ದು, ಲಸಿಕೆ ಕಂಡುಹಿಡಿಯುವಲ್ಲಿ ಪ್ರತಿ ವಾರ ವಿಳಂಬವಾದಷ್ಟು ಜಾಗತಿಕವಾಗಿ ಕರೊನಾ ವೈರಸ್​ಗೆ ಬಲಿಯಾಗುವವರ ಸಂಖ್ಯೆ ಅಧಿಕವಾಗುತ್ತದೆ. ಹೀಗಾಗಿ ಸ್ವಯಂಪ್ರೇರಿತರು ಲಸಿಕೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಡಬೇಕೆಂದು ಹೇಳಿದ್ದು, ಮುಂದೆ ಬಂದಲ್ಲಿ ಆದಷ್ಟು ಬೇಗ ಲಸಿಕೆ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.

ಲಸಿಕೆ ಹಾಗೂ ಡ್ರಗ್ಸ್​ಗಳನ್ನು ಬಳಸಲು ಅಧಿಕೃತ ಅನುಮತಿಯನ್ನು ನೀಡುವ ಮುಂಚೆಯೇ ಮೂರು ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮೊದಲನೇ ಹಂತವಾಗಿ ಕೆಲ ಮಂದಿಗೆ ಲಸಿಕೆ ಇಂಜೆಕ್ಟ್​ ಮಾಡಿ ಅವರ ಪ್ರತಿಕ್ರಿಯೆಯನ್ನು ವೀಕ್ಷಿಸಲಾಗುತ್ತದೆ. ಎರಡನೇ ಹಂತದಲ್ಲಿ ಇನ್ನು ಹೆಚ್ಚಿನ ಮಂದಿಗೆ ಲಸಿಕೆಯನ್ನು ಹಾಕಲಾಗುತ್ತದೆ. ಕೊನೆಯದಾಗಿ ನೂರರಿಂದ ಸಾವಿರ ಮಂದಿಯನ್ನು ದೀರ್ಘಾವಧಿಯವರೆಗೆ ಪರೀಕ್ಷಿಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಪ್ರಕ್ರಿಯೆ ಪೂರ್ಣಗೊಳ್ಳಲು ತಿಂಗಳುಗಳಾಗಬಹುದಷ್ಟೇ ವರ್ಷಗಳಾಗುವುದಿಲ್ಲ. ಮೂರೂ ಹಂತಗಳನ್ನು ಬಳಸಲೇಬೇಕು. ಕಡೆಗಣಿಸುವಂತಿಲ್ಲ ಎಂದು ಸಲಹೆ ನೀಡಿದ್ದಾರೆ. ಈ ಪ್ರಕ್ರಿಯೆಗೆ ಸುಮಾರು 3,000 ಸ್ವಯಂಪ್ರೇರಿತರ ಅವಶ್ಯಕತೆ ಇದೆ. ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಸ್ವಯಂಪ್ರೇರಿತರ ಪ್ರಾಣಕ್ಕೂ ಸಂಚಕಾರ ಎದುರಾಗಲಿದ್ದು, ಇದಕ್ಕೆಲ್ಲಾ ಅವರು ಸಿದ್ಧರಿರಬೇಕೆಂದು ಹೇಳಿದ್ದಾರೆ. ಪ್ರಯೋಗ ಸಮಯದಲ್ಲಿ ಅವರನ್ನು ನಿರಂತರ ನಿಗಾವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಸಾವನ್ನು ಮಡಲಲ್ಲಿ ಕಟ್ಟಿಕೊಂಡು ಈ ಪ್ರಯೋಗಕ್ಕೆ ಬರುವುದಾದರೂ ಯಾರು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಅದರೂ ಲಸಿಕೆ ಕಂಡುಹಿಡಿಯುವ ನಿರಂತರ ಪ್ರಯತ್ನ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net