ಚಳಿಗಾಲದಲ್ಲಿ ಮಕ್ಕಳ ಚರ್ಮದ ರಕ್ಷಣೆಗೆ ಯಾವ ಎಣ್ಣೆ ಬೆಸ್ಟ್? ನಿಮ್ಮೆಲ್ಲಾ ಗೊಂದಲಕ್ಕೆ ಇಲ್ಲಿದೆ ಉತ್ತರ! Massage

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲದಲ್ಲಿ ಮಕ್ಕಳ ಚರ್ಮ ಬೇಗ ಒಳಗುತ್ತದೆ
  • ಬೇಸಿಗೆಯಲ್ಲಿ ಉಪಯೋಗಿಸುವ ಎಣ್ಣೆ ಚಳಿಗಾಲದಲ್ಲಿ ಉಪಯೋಗಿಸುವುದು ಸೂಕ್ತಿವೇ?
  • ಮಕ್ಕಳಿಗೆ ಎಣ್ಣೆ ಮಸಾಜ್​ ಮಾಡುವ ಮೊದಲು ಗಮನದಲ್ಲಿರಬೇಕಾದ ಅಂಶಗಳಾವುವು?
Winter: ಚಳಿಗಾಲ ಬಂತೆಂದರೆ ಸಾಕು, ಪೋಷಕರಿಗೆ ತಮ್ಮ ಪುಟ್ಟ ಕಂದಮ್ಮಗಳ ಚರ್ಮದ ಆರೈಕೆಯದ್ದೇ ಚಿಂತೆ. ಮಗುವಿನ ಕೋಮಲವಾದ ಚರ್ಮ ಈ ಸಮಯದಲ್ಲಿ ಬೇಗನೇ ಒಣಗುತ್ತದೆ ಹೀಗಾಗಿ, ಮಗುವಿನ ಸ್ನಾನಕ್ಕೂ ಮುನ್ನ ಎಣ್ಣೆ ಹಚ್ಚಿ ಮಸಾಜ್ (Massage) ಮಾಡುವುದು ಭಾರತೀಯ ಪರಂಪರೆಯಲ್ಲಿ ನಡೆದು ಬಂದ ವಾಡಿಕೆ. ಆದರೆ, ನೀವು ಬಳಸುತ್ತಿರುವ ಎಣ್ಣೆ ಈ ಚಳಿಗಾಲಕ್ಕೆ ಸೂಕ್ತವಾಗಿದೆಯೇ? ಅಥವಾ ಅದು ಮಗುವಿನ ಚರ್ಮಕ್ಕೆ ಹಾನಿ ಮಾಡುತ್ತಿದೆಯೇ? ಎಂಬ ಬಗ್ಗೆ ಗಮನ ಹರಿಸುವುದು ಮುಖ್ಯ.

ಚಳಿಗಾಲದಲ್ಲಿ ಮಸಾಜ್ ಏಕೆ ಅಗತ್ಯ?

ಚಳಿಗಾಲದಲ್ಲಿ ಮಗುವಿಗೆ ಮಸಾಜ್ ಮಾಡುವುದರಿಂದ ಕೇವಲ ಚರ್ಮದ ತೇವಾಂಶ ಉಳಿಯುವುದು ಮಾತ್ರವಲ್ಲದೆ, ಮಗುವಿನ ರಕ್ತ ಪರಿಚಲನೆ ಸುಧಾರಿಸುತ್ತದೆ, ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಮಗು ಶಾಂತವಾಗಿ ನಿದ್ರಿಸಲು ಸಹಕಾರಿಯಾಗುತ್ತದೆ.

ಚಳಿಗಾಲಕ್ಕೆ ಯಾವ ಎಣ್ಣೆಗಳು ಉತ್ತಮ?

ಬೇಸಿಗೆಯಲ್ಲಿ ಬಳಸುವ ಎಣ್ಣೆಗಳು ಚಳಿಗಾಲಕ್ಕೆ ಬಳಸಲು ಕೆಲವೊಮ್ಮೆ ಸೂಕ್ತವಾಗುವುದಿಲ್ಲ. ಚಳಿಗಾಲದಲ್ಲಿ ಮಗುವಿನ ದೇಹಕ್ಕೆ ಉಷ್ಣತೆ ನೀಡುವ ಮತ್ತು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಎಣ್ಣೆಗಳನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ.

ಚಳಿಗಾಲದಲ್ಲಿ ಈ ಕೆಳಗಿನ ಎಣ್ಣೆಗಳ ಬಳಕೆ ಉತ್ತಮ

ಸಾಸಿವೆ ಎಣ್ಣೆ (Mustard Oil)

ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆ ಇದು ಬಹಳ ಜನಪ್ರಿಯ. ಇದು ದೇಹಕ್ಕೆ ನೈಸರ್ಗಿಕವಾಗಿ ಉಷ್ಣತೆಯನ್ನು ನೀಡುತ್ತದೆ. ಆದರೆ, ಮಗುವಿನ ಚರ್ಮಕ್ಕೆ ನೇರವಾಗಿ ಹಚ್ಚುವ ಮುನ್ನ ಅದಕ್ಕೆ ಸ್ವಲ್ಪ ಬೆಳ್ಳುಳ್ಳಿ ಅಥವಾ ಓಮ ಕಾಳು (Ajwain) ಹಾಕಿ ಬಿಸಿ ಮಾಡಿ ಬಳಸುವುದು ಉತ್ತಮ.

ಎಳ್ಳೆಣ್ಣೆ (Sesame Oil)

ಆಯುರ್ವೇದದಲ್ಲಿ ಎಳ್ಳೆಣ್ಣೆಗೆ ವಿಶೇಷ ಸ್ಥಾನವಿದೆ. ಇದು ಚರ್ಮದ ಆಳಕ್ಕೆ ಇಳಿದು ಪೋಷಣೆ ನೀಡುತ್ತದೆ ಮತ್ತು ಚಳಿಗಾಲದಲ್ಲಿ ಮಗುವಿನ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.

ಬಾದಾಮಿ ಎಣ್ಣೆ (Almond Oil)

ಬಾದಾಮಿ ಎಣ್ಣೆ ಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಮಗುವಿನ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆಲಿವ್ ಆಯಿಲ್ (Olive Oil)

ಚರ್ಮದ ತೇವಾಂಶವನ್ನು ಕಾಪಾಡಲು ಆಲಿವ್ ಆಯಿಲ್ ಅತ್ಯುತ್ತಮವಾಗಿದೆ. ಆದರೆ ಮಗುವಿಗೆ ಚರ್ಮದ ಅಲರ್ಜಿ ಇದ್ದರೆ ಇದನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಚಳಿಗಾಲದಲ್ಲಿ ತೆಂಗಿನ ಎಣ್ಣೆ ಬಳಸಬಹುದೇ?

ದಕ್ಷಿಣ ಭಾರತದಲ್ಲಿ ತೆಂಗಿನ ಎಣ್ಣೆ ಹೆಚ್ಚು ಬಳಕೆ ಆಗುತ್ತದೆ. ಆದರೆ ತೆಂಗಿನ ಎಣ್ಣೆ ನೈಸರ್ಗಿಕವಾಗಿ ಶೀತ ಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ಇದು ಚರ್ಮದ ಮೇಲೆ ಬೇಗನೆ ಹೆಪ್ಪುಗಟ್ಟುವುದರಿಂದ, ತೀವ್ರ ಚಳಿಯಿರುವ ಪ್ರದೇಶಗಳಲ್ಲಿ ಇದನ್ನು ಬಳಸುವುದರಿಂದ ಮಗುವಿಗೆ ಶೀತವಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಬಳಸುವುದಾದರೆ ಸ್ವಲ್ಪ ಬಿಸಿ ಮಾಡಿ ಬಳಸುವುದು ಒಳ್ಳೆಯದು.

ಮಕ್ಕಳಿಗೆ ಎಣ್ಣೆ ಹಚ್ಚುವ ಮುನ್ನ ಗಮನಿಸಬೇಕಾದ ಅಂಶಗಳು

ಪ್ಯಾಚ್ ಟೆಸ್ಟ್

ಯಾವುದೇ ಹೊಸ ಎಣ್ಣೆಯನ್ನು ಬಳಸುವ ಮೊದಲು ಮಗುವಿನ ಕಾಲಿನ ಸಣ್ಣ ಭಾಗಕ್ಕೆ ಹಚ್ಚಿ ನೋಡಿ. 24 ಗಂಟೆಗಳ ಕಾಲ ಯಾವುದೇ ಗುಳ್ಳೆ ಅಥವಾ ಕೆಂಪಾಗುವಿಕೆ ಕಂಡುಬರದಿದ್ದರೆ ಮಾತ್ರ ಆ ಎಣ್ಣೆಯನ್ನು ನಿತ್ಯ ಬಳಸಿ.

ನೈಸರ್ಗಿಕ ಉತ್ಪನ್ನಗಳಿರಲಿ

ರಾಸಾಯನಿಕಯುಕ್ತ ಅಥವಾ ಅತಿಯಾದ ಸುಗಂಧ ದ್ರವ್ಯವಿರುವ ಎಣ್ಣೆಗಳನ್ನು ಬಳಸಬೇಡಿ. ಇವು ಮಗುವಿನ ಚರ್ಮದ ರಂಧ್ರಗಳನ್ನು ಮುಚ್ಚುವ ಅಪಾಯವಿರುತ್ತದೆ.

ಮಸಾಜ್ ಮಾಡುವ ಸಮಯ

ಮಗುವಿಗೆ ಸ್ನಾನ ಮಾಡಿಸುವ ಕನಿಷ್ಠ 15-20 ನಿಮಿಷಗಳ ಮೊದಲು ಮಸಾಜ್ ಮಾಡಿ. ಮಸಾಜ್ ಮಾಡುವ ಕೋಣೆ ಬೆಚ್ಚಗಿದ್ದರೆ ಉತ್ತಮ.

ಸ್ನಾನದ ನಂತರ ಮೊಯಿಶ್ಚರೈಸರ್ ಬಳಸಿ

ಮಸಾಜ್ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ, ನಂತರ ಮಗುವಿನ ಚರ್ಮಕ್ಕೆ ಹೊಂದುವ ಲೋಶನ್ ಅಥವಾ ಕ್ರೀಮ್ ಹಚ್ಚಿ ಚರ್ಮ ತೇವಾಂಶದಿಂದ ಇರವಂತೆ ಕಾಪಾಡಿಕೊಳ್ಳಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net