ಡಿಸ್ಕೌಂಟ್​ ಬೋರ್ಡ್​ ನೋಡಿ ಮೆಡಿಸಿನ್​ ತೆಗೆದುಕೊಳ್ಳಬೇಡಿ... ಇದರ ಹಿಂದಿದೆ ಒಂದು ಬಿಗ್​ ಸ್ಕ್ಯಾಮ್! Medicine

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇಂದು ನಕಲಿ ಔಷಧಿಗಳು ಹೆಚ್ಚಾಗಿ ಹರಡುತ್ತಿದ್ದು, ಆರೋಗ್ಯಕ್ಕೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿವೆ
  • ಡಿಸ್ಕೌಂಟ್​ ನೀಡುವಂತಹ ಮಾರುಕಟ್ಟೆ ತಂತ್ರಗಳು ನಕಲಿ ಔಷಧಿಗಳ ಹರಡುವಿಕೆಗೆ ದಾರಿ ಮಾಡಿಕೊಡುತ್ತಿವೆ
  • ಔಷಧ ನಿಯಂತ್ರಣ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿಂದಾಗಿ ಸರಿಯಾಗಿ ತಪಾಸಣೆ ನಡೆಯುತ್ತಿಲ್ಲ
  • ಕೇರಳದಲ್ಲಿ 1,167 ಬ್ರಾಂಡೆಡ್ ಔಷಧಿಗಳು ಮತ್ತು 467 ಜೆನೆರಿಕ್ ಔಷಧಿಗಳು ಕಳಪೆ ಎಂದು ಪತ್ತೆ
Medicine : ಮೆಡಿಕಲ್​ ಮಾಫಿಯಾ ಅನ್ನೋ ಪದ ಹೊಸದೇನಲ್ಲ. ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು ಕೆಲ ಕಂಪನಿಗಳು ಬೆಳೆಯುತ್ತಿವೆ. ಕಳವಳಕಾರಿ ಸಂಗತಿ ಏನೆಂದರೆ, ಇಂದು ನಕಲಿ ಔಷಧಿಗಳು ಹೆಚ್ಚಾಗಿ ಹರಡುತ್ತಿದ್ದು, ಆರೋಗ್ಯಕ್ಕೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿವೆ. ಪ್ರಸ್ತುತ ಎಲ್ಲೆಡೆ ಔಷಧ ವಲಯದಲ್ಲಿನ ಕಠಿಣ ಸ್ಪರ್ಧೆ ಮತ್ತು ಕಡಿಮೆ ಬೆಲೆ ಅಥವಾ ಡಿಸ್ಕೌಂಟ್​ ನೀಡುವಂತಹ ಮಾರುಕಟ್ಟೆ ತಂತ್ರಗಳು ನಕಲಿ ಔಷಧಿಗಳ ಹರಡುವಿಕೆಗೆ ದಾರಿ ಮಾಡಿಕೊಡುತ್ತಿವೆ.
ಕೆಲವು ಕಂಪನಿಯ ಹೆಸರು ಮತ್ತು ಬ್ರಾಂಡ್‌ನಲ್ಲಿ ತಯಾರಿಸಿದ ಕಡಿಮೆ ಗುಣಮಟ್ಟದ ನಕಲಿ ಔಷಧಿಗಳನ್ನು ಮೂಲ ಔಷಧದ ಜೊತೆಗೆ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ವರದಿಗಳು ಇದೀಗ ಬೆಳಕಿಗೆ ಬರುತ್ತಿವೆ. ಯಾವುದೇ ರಾಜ್ಯದಿಂದ ಬಿಲ್‌ನೊಂದಿಗೆ ಔಷಧಿಗಳನ್ನು ಮುಕ್ತವಾಗಿ ತರಬಹುದು ಮತ್ತು ಅವು ಮಾರುಕಟ್ಟೆಗೆ ಬರುವ ಮೊದಲು ಅವುಗಳ ಗುಣಮಟ್ಟದ ತಪಾಸಣೆಯನ್ನು ಸರಿಯಾಗಿ ನಡೆಸುವುದಿಲ್ಲ ಎಂಬ ಅಂಶವನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೆರೆಯ ರಾಜ್ಯ ಕೇರಳದಲ್ಲಿ ಪ್ರತಿ ವರ್ಷ 85,000 ಕ್ಕೂ ಹೆಚ್ಚು ಬ್ಯಾಚ್‌ಗಳ ವಿವಿಧ ಔಷಧಿಗಳು ಮಾರಾಟವಾಗುತ್ತವೆ. ಆದಾಗ್ಯೂ, ಔಷಧ ನಿಯಂತ್ರಣ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿಂದಾಗಿ, ಪ್ರತಿ ವರ್ಷ ಸುಮಾರು 12,000 ಬ್ಯಾಚ್‌ಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ. ಹೀಗಾಗಿ ನಕಲಿ ಔಷಧಗಳ ಹರಡುವಿಕೆ ಹೆಚ್ಚಾಗಿದೆ.

ಆಘಾತಕಾರಿಯಾಗಿವೆ ತಪಾಸಣೆ ವರದಿಗಳು

ಆರ್‌ಟಿಐ ದಾಖಲೆಗಳ ಪ್ರಕಾರ, 2011 ರಿಂದ ಆಗಸ್ಟ್ 10, 2021 ರವರೆಗೆ ಕೇರಳದಲ್ಲಿ ನಡೆಸಿದ ತಪಾಸಣೆಯಲ್ಲಿ 1,167 ಬ್ರಾಂಡೆಡ್ ಔಷಧಿಗಳು ಮತ್ತು 467 ಜೆನೆರಿಕ್ ಔಷಧಿಗಳು ಕಳಪೆ ಗುಣಮಟ್ಟದ್ದಾಗಿರುವುದು ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ, ಐದು ಜಿಲ್ಲೆಗಳಿಂದಲೇ 5.2 ಕೋಟಿ ರೂ. ಮೌಲ್ಯದ ಕಳಪೆ ಗುಣಮಟ್ಟದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕಾಗಿ ಕದ್ದು ತರಲಾಗಿತ್ತು ಎಂದು ತಿಳಿದುಬಂದಿದೆ.

ಜನರು ತಿಳಿಯಬೇಕಾದ್ದು ಏನು?

* ನೀವು ದೀರ್ಘಕಾಲದಿಂದ ತೆಗೆದುಕೊಳ್ಳುತ್ತಿರುವ ಔಷಧಿ ರಿಯಾಯಿತಿ ನೀಡುವ ಶಾಪ್​ನಿಂದ ಬಂದಿದ್ದರೆ, ಸದ್ಯಕ್ಕೆ ಅದನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ.
* ಔಷಧದ ಗುಣಮಟ್ಟ, ಬಣ್ಣ, ಆಕಾರ ಅಥವಾ ಪ್ಯಾಕೇಜಿಂಗ್‌ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ಅದನ್ನು ತೆಗೆದುಕೊಳ್ಳಬೇಡಿ.
* ಯಾವುದೇ ದೈಹಿಕ ಅಸ್ವಸ್ಥತೆಯನ್ನು ಅನುಭವಿಸಿದರೆ ನಿಮಗೆ ಚಿಕಿತ್ಸೆ ನೀಡುವ ವೈದ್ಯರ ಸಲಹೆಯನ್ನು ಪಡೆಯಿರಿ.
* ರಿಯಾಯಿತಿ ಎಂಬುದೇ ಒಂದು ವಂಚನೆಯಾಗಿದೆ. ಇದು ಫಾರ್ಮಸಿ ಕಾಯ್ದೆಗೆ ವಿರುದ್ಧವಾಗಿದೆ.
* ಸರ್ಕಾರಿ ಸಂಸ್ಥೆಗಳು ಅಥವಾ ನೀವು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಔಷಧಾಲಯವನ್ನು ಹೊರತುಪಡಿಸಿ, ರಿಯಾಯಿತಿ ಫಲಕಗಳನ್ನು ಹೊಂದಿರದ ವಿಶ್ವಾಸಾರ್ಹ ಸಂಸ್ಥೆಗಳಿಂದ ಔಷಧಿಗಳನ್ನು ಖರೀದಿಸಿ. ಆನ್‌ಲೈನ್‌ನಲ್ಲಿ ಔಷಧಿಗಳನ್ನು ಖರೀದಿಸಬೇಡಿ. ಯಾವುದೇ ಕಾರಣಕ್ಕೂ ರಿಯಾಯಿತಿಗಳಿಗೆ ಮರುಳಾಗಬೇಡಿ.
ನಕಲಿ ಔಷಧಿಗಳು ಯಾವುದೇ ಆರೋಗ್ಯ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು. ನಕಲಿ ಔಷಧಿಗಳು ವಿಷಕಾರಿ ಅಥವಾ ಅಪಾಯಕಾರಿ ಅಂಶಗಳನ್ನು ಒಳಗೊಂಡಿರಬಹುದು. ಇದು ಆಂತರಿಕ ಅಂಗಗಳಿಗೆ ಹಾನಿ ಮಾಡಬಹುದು. ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಾಧ್ಯತೆಯೂ ಇದೆ. ಔಷಧದ ಮಿಲಿಗ್ರಾಂ ಪ್ರಮಾಣವು ತುಂಬಾ ಹೆಚ್ಚಿದ್ದರೆ, ಅದು ವಿಷ ಮತ್ತು ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

ಅಲರ್ಜಿ ಪ್ರತಿಕ್ರಿಯೆ

ನಕಲಿ ಔಷಧಿಗಳು ಲೇಬಲ್‌ನಲ್ಲಿ ಪಟ್ಟಿ ಮಾಡದ ಅಥವಾ ಅನುಮೋದಿಸದ ಇತರ ಪದಾರ್ಥಗಳನ್ನು ಒಳಗೊಂಡಿರಬಹುದು. ಇದು ದದ್ದುಗಳಿಂದ ಹಿಡಿದು ಮಾರಕ ಅನಾಫಿಲ್ಯಾಕ್ಸಿಸ್‌ವರೆಗೆ ಅಲರ್ಜಿಯನ್ನು ಉಂಟುಮಾಡಬಹುದು. ಹೀಗಾಗಿ ಔಷಧಗಳ ವಿಚಾರದಲ್ಲಿ ತುಂಬಾ ಎಚ್ಚರಿಕೆಯನ್ನು ವಹಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net