ನನ್ನ ಪತಿ ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದರೂ... ಗಂಡನ ಬಗ್ಗೆ ಹೇಳುತ್ತಾ ಕಣ್ಣೀರಾಕಿದ ನಟಿ ಪೂರ್ಣ! Actress Poorna

ನಟಿ ಪೂರ್ಣಾ ಅಲಿಯಾಸ್​ ಶಾಮ್ನಾ ಖಾಸಿಂ
ನಟಿ ಪೂರ್ಣಾ ಅಲಿಯಾಸ್​ ಶಾಮ್ನಾ ಖಾಸಿಂ
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಪೂರ್ಣಾ ಅಲಿಯಾಸ್​ ಶಾಮ್ನಾ ಖಾಸಿಂ ಕನ್ನಡಿಗರಿಗೂ ಪರಿಚಿತರು
  • ಜೋಶ್​ ಸಿನಿಮಾದ ಯಶಸ್ಸು ಪೂರ್ಣಾರನ್ನು ಕನ್ನಡಿಗರಿಗೆ ಪರಿಚಯಿಸಿದೆ
  • ಪೂರ್ಣಾ ಬಾಲ್ಯದಿಂದಲೂ ಶಾಸ್ತ್ರೀಯ ನೃತ್ಯ ನರ್ತಕಿ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ
  • ಇದೀಗ ಪೂರ್ಣಾ ಅವರು ಭಾವನಾತ್ಮಕ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ
ಚೆನ್ನೈ: ನಟಿ ಪೂರ್ಣಾ ( Actress Poorna ) ಅಲಿಯಾಸ್​ ಶಾಮ್ನಾ ಖಾಸಿಂ ಕನ್ನಡಿಗರಿಗೂ ಪರಿಚಿತರು. ಜೋಶ್​, ರಾಧನ ಗಂಡ ಹಾಗೂ 100 ಸಿನಿಮಾದಲ್ಲಿ ನಟಿಸಿದ್ದಾರೆ. ನಟಿಸಿದ್ದು, ಕೆಲವೇ ಸಿನಿಮಾಗಳಾದರೂ ಜೋಶ್​ ಸಿನಿಮಾದ ಯಶಸ್ಸು ಪೂರ್ಣಾರನ್ನು ಕನ್ನಡಿಗರಿಗೆ ಪರಿಚಯಿಸಿದೆ. ಸದ್ಯ ತಮಿಳು ಮತ್ತು ತೆಲುಗಿನಲ್ಲಿ ಪೋಷಕ ಪಾತ್ರಗಳಲ್ಲಿ ಪೂರ್ಣ ನಟಿಸುತ್ತಿದ್ದಾರೆ. ಇನ್ನೊಂದೆಡೆ ಕಿರುತೆರೆಯ ಡಾನ್ಸ್​ ಶೋಗಳಲ್ಲಿ ಜಡ್ಜ್​ ಆಗಿಯೂ ಕೆಲಸ ಮಾಡುತ್ತಾರೆ.
ಅಂದಹಾಗೆ, 2022, ಅಕ್ಟೋಬರ್ ತಿಂಗಳಲ್ಲಿ ದುಬೈ ಮೂಲದ ಜೆಬಿಎಸ್ ಗ್ರೂಪ್ ಸಂಸ್ಥಾಪಕ ಶಾನಿದ್ ಆಸಿಫ್ ಅಲಿ ಎಂಬುವರನ್ನು ಪೂರ್ಣ ವಿವಾಹವಾದರು. ಮದುವೆಯ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ ಪೂರ್ಣ, ಸ್ವಲ್ಪ ಸಮಯ ಸಿನಿಮಾ ರಂಗದಿಂದ ಬಿಡುವು ಮಾಡಿಕೊಂಡರು. ಆ ಬಳಿಕ ಮಹೇಶ್ ಬಾಬು ಅವರ 'ಗುಂಟೂರ್ ಖಾರಂ' ಚಿತ್ರದಲ್ಲಿ ಕುರ್ಚಿ ಮಡಚಿ ವಿಶೇಷ ಹಾಡಿನೊಂದಿಗೆ ಮತ್ತೆ ಚಿತ್ರರಂಗಕ್ಕೆ ಮರಳಿದರು. ಈಗ ಅವರು ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಪೂರ್ಣಾ ಅವರು ಬಾಲ್ಯದಿಂದಲೂ ಶಾಸ್ತ್ರೀಯ ನೃತ್ಯ ನರ್ತಕಿ ಎಂಬುದು ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, 'ಸೂಪರ್ ಡ್ಯಾನ್ಸರ್' ಸ್ಪರ್ಧೆಯಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದರು. ಆದರೆ, ನಟಿಯಾದ ಬಳಿಕ ಡಾನ್ಸ್​ ಸ್ಪರ್ಧೆಗಳಿಂದ ದೂರ ಉಳಿದಿದ್ದರು. ಇತ್ತೀಚೆಗೆ, ಅವರು ಡಾನ್ಸ್​ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ತಮ್ಮ ಜೀವನದಲ್ಲೇ ಈ ದಿನ ಮರೆಯಲಾಗದ ದಿನ ಎಂದಿದ್ದಾರೆ. ಅಲ್ಲದೆ, ತಮ್ಮ ತಾಯಿಯ ಮಾತುಗಳು ಇಂದು ನಿಜವಾಗಿವೆ ಎಂದು ಹೇಳುವ ಮೂಲಕ ಪೂರ್ಣಾ ಅವರು ಭಾವನಾತ್ಮಕ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ.
ಹಲವು ವರ್ಷಗಳ ನಂತರ, ಪೂರ್ಣಾ ಅವರು ತಮ್ಮ ಶಾಸ್ತ್ರೀಯ ನೃತ್ಯವನ್ನು ಮತ್ತೆ ವೇದಿಕೆ ಮೇಲೆ ಪ್ರದರ್ಶಿಸಿದ್ದಾರೆ. ಈ ಅನುಭವವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತಮ್ಮ ಗಂಡನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಅಷ್ಟಕ್ಕೂ ಪೂರ್ಣಾ ಅವರು ಏನು ಬರೆದಿಕೊಂಡಿದ್ದಾರೆ ಅಂದರೆ, ನನ್ನ ತಾಯಿಯ ಕಠಿಣ ಪರಿಶ್ರಮ ಮತ್ತು ಪ್ರೋತ್ಸಾಹದಿಂದಾಗಿ ನಾನು ನರ್ತಕಿಯಾದೆ. ನಾನು ಮದುವೆಯಾದಂತಹ ಸಂದರ್ಭದಲ್ಲಿ ನನ್ನ ತಾಯಿಯಂತೆ ನನ್ನ ನೃತ್ಯವನ್ನು ಬೆಂಬಲಿಸುವ ಒಳ್ಳೆಯ ಸಂಗಾತಿಯನ್ನು ನನಗೆ ಕೊಡು ಎಂದು ದೇವರನ್ನು ಕೇಳಿಕೊಂಡಿದ್ದೆ. ನಿನ್ನ ಕನಸುಗಳನ್ನು ನನಸಾಗಿಸುವ ಗಂಡ ನಿನಗೆ ಸಿಗಲಿ ಎನ್ನುವ ಮೂಲಕ ನನ್ನ ತಾಯಿ ಕೂಡ ನನ್ನನ್ನು ಆಶೀರ್ವದಿಸಿದರು. ಇದೀಗ ದೇವರು ನನ್ನ ಕನಸನ್ನು ನನಸಾಗಿಸಿದ್ದಾನೆ. ನನ್ನ ತಾಯಿ ಹೇಳಿದ ಮಾತುಗಳು ನಿಜವಾಗಿವೆ ಎಂದು ಪೂರ್ಣಾ ಬರೆದುಕೊಂಡಿದ್ದಾರೆ.
ನನ್ನ ಪತಿ ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದರೂ, ನನ್ನ ನೃತ್ಯವನ್ನು ಅವರು ಬೆಂಬಲಿಸಿದರು. ಜಾತಿ ಮತ್ತು ಯಾವುದೇ ಹಿನ್ನೆಲೆಯನ್ನು ಲೆಕ್ಕಿಸದೆ ಮನುಷ್ಯನಾಗಿ ಪ್ರೀತಿ ಮತ್ತು ಗೌರವವನ್ನು ತೋರಿಸುವ ಅವರ ಒಳ್ಳೆಯ ಹೃದಯಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದು ಪೂರ್ಣಾ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸದ್ಯ ಪೂರ್ಣಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net