ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲು: ಹರಿಣಗಳ ನಾಯಕ ಮಾರ್ಕ್ರಾಮ್ ಕೊಟ್ಟ ಕಾರಣವಿದು...IND vs SA

ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಮಾರ್ಕ್ರಾಮ್
ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಮಾರ್ಕ್ರಾಮ್
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತಕ್ಕೆ ಶುಭಾರಂಭ
  • ಮೊದಲ ಟಿ20 ಪಂದ್ಯವನ್ನು 101 ರನ್‌ಗಳಿಂದ ಗೆದ್ದುಕೊಂಡ ಭಾರತ
  • ತಮ್ಮ ಬ್ಯಾಟಿಂಗ್ ವೈಫಲ್ಯದಿಂದಾಗಿ ಈ ಸೋಲು ಅನುಭವಿಸಿದೆವು ಆಫ್ರಿಕಾ ನಾಯಕ
ಭುವನೇಶ್ವರ: ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ( IND vs SA ) ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಮಂಗಳವಾರ ಒಡಿಶಾದ ಕಟಕ್‌ನಲ್ಲಿರುವ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ 101 ರನ್‌ಗಳಿಂದ ಗೆದ್ದುಕೊಂಡಿತು. ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಅನುಭವಿಸಿದ ಬಳಿಕ ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಮಾರ್ಕ್ರಾಮ್ ಅವರು ಬೇಸರ ಹೊರಹಾಕಿದರು. ತಮ್ಮ ಬ್ಯಾಟಿಂಗ್ ವೈಫಲ್ಯದಿಂದಾಗಿ ಈ ಸೋಲು ಅನುಭವಿಸಿದೆವು ಎಂದು ಹೇಳಿದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿತು. ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಹಾರ್ದಿಕ್ ಪಾಂಡ್ಯ (ಅಜೇಯ 59 ರನ್​, 28 ಎಸೆತ, 6 ಬೌಂಡರಿ, 4 ಸಿಕ್ಸರ್) ಆಪತ್ಕಾಲದಲ್ಲಿ ಅರ್ಧಶತಕ ಗಳಿಸಿದರು. ತಿಲಕ್ ವರ್ಮ (26) ಮತ್ತು ಅಕ್ಷರ್ ಪಟೇಲ್ (23) ಉಪಯುಕ್ತ ರನ್​ ಕಾಣಿಕೆ ನೀಡುವ ಮೂಲಕ ನಿರ್ಣಾಯಕ ಪಾತ್ರ ವಹಿಸಿದರು.
ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಲುಂಗಿ ಎಂಗಿಡಿ ಮೂರು ವಿಕೆಟ್ ಪಡೆದರು. ಲುಥೋ ಸಿಪಾಮ್ಲಾ ಎರಡು ವಿಕೆಟ್ ಪಡೆದರೆ, ಡೊನೊವನ್ ಫೆರೇರಾ ಒಂದು ವಿಕೆಟ್ ಪಡೆದರು.
ಟೀಮ್​ ಇಂಡಿಯಾ ನೀಡಿದ್ದ 176 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಹೀನಾಯವಾಗಿ ವಿಫಲವಾಯಿತು. 12.3 ಓವರ್‌ಗಳಲ್ಲಿ 74 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳಲ್ಲಿ ಡೆವಾಲ್ಡ್ ಬ್ರೆವಿಸ್ (22), ಟ್ರಿಸ್ಟಾನ್ ಸ್ಟಬ್ಸ್ (14), ಐಡೆನ್ ಮಾರ್ಕ್ರಾಮ್ (14) ಮತ್ತು ಮಾರ್ಕೊ ಜಾನ್ಸೆನ್ (12) ಮಾತ್ರ ಎರಡಂಕಿಯ ರನ್ ಗಳಿಸಿದರು. ಉಳಿದ ಬ್ಯಾಟರ್​ಗಳು ಭಾರತ ಬೌಲಿಂಗ್​ ದಾಳಿಗೆ ಬೆದರಿ ತಮ್ಮ ವಿಕೆಟ್​ಗಳನ್ನು ಒಪ್ಪಿಸಿದರು.
ಟೀಮ್​ ಇಂಡಿಯಾ ಬೌಲರ್‌ಗಳಲ್ಲಿ, ಅರ್ಷದೀಪ್ ಸಿಂಗ್, ಜಸ್​ಪ್ರೀತ್​ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ ಒಂದೊಂದು ವಿಕೆಟ್ ಪಡೆದರು.
ಪಂದ್ಯದ ನಂತರ ಮಾತನಾಡಿದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್, ನಾವು ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆವು. ಬೌಲಿಂಗ್‌ನಲ್ಲಿ ನಾವು ಬಯಸಿದ ರೀತಿಯಲ್ಲಿ ಪ್ರಾರಂಭವನ್ನು ಪಡೆದೆವು. ಇದು ನಮಗೆ ಸಂತೋಷವನ್ನು ತಂದಿತು. ಆದರೆ, ದುರಾದೃಷ್ಟವಶಾತ್, ಬ್ಯಾಟಿಂಗ್‌ನಲ್ಲಿ ನಮ್ಮಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದರು.
ಟಿ20 ಸ್ವರೂಪದಲ್ಲಿ ಈ ರೀತಿ ನಡೆಯುವುದು ಸಾಮಾನ್ಯ. ಆದರೆ, ಮೊದಲ ಪಂದ್ಯದಲ್ಲಿ ಅದು ಸಂಭವಿಸಿದ್ದು ನಿಜಕ್ಕೂ ದುಃಖಕರ. ಈ ಸೋಲಿನಿಂದ ನಾವು ಕಲಿಯುತ್ತೇವೆ. ನಾವು ಸಾಧ್ಯವಾದಷ್ಟು ಬೇಗ ಮೊದಲ ಪಂದ್ಯದ ಸೋಲಿನ ಕಹಿಯನ್ನು ಮರೆತು ಮುಂದಿನ ಪಂದ್ಯಕ್ಕೆ ಸಿದ್ಧರಾಗಬೇಕಿದೆ. ಇನ್ನು ಎರಡು ದಿನಗಳಲ್ಲಿ ಎರಡನೇ ಟಿ20 ಪಂದ್ಯವಿದೆ. ಆ ಪಂದ್ಯದಲ್ಲಿ ನಾವು ಗೆಲುವಿಗಾಗಿ ಆಡುತ್ತೇವೆ ಎಂದು ಮಾರ್ಕ್ರಾಮ್ ಹೇಳಿದರು.
175 ರನ್​ಗಳ ಗುರಿಯನ್ನು ಮುಟ್ಟುವುದು ನಮಗೆ ಸುಲಭವಾಗಿತ್ತು. ಆದರೆ, ಜೊತೆಯಾಟ ನಿರ್ಮಿಸುವಲ್ಲಿನ ವೈಫಲ್ಯ, ಅಸ್ಥಿರ ಬ್ಯಾಟಿಂಗ್ ಮತ್ತು ಬೇಗ ವಿಕೆಟ್​​ಗಳನ್ನು ಕಳೆದುಕೊಂಡಿದು ನಮ್ಮ ಸೋಲಿಗೆ ಕಾರಣಗಳಾಗಿವೆ. ಇವುಗಳ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ ಮತ್ತು ಮುಂದಿನ ಪಂದ್ಯದತ್ತ ಗಮನ ಹರಿಸುವುದಾಗಿ ಮಾರ್ಕ್ರಮ್ ಇದೇ ಸಂದರ್ಭದಲ್ಲಿ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net