ಗುಂಡು ಗುಂಡಗಿದ್ದರೆ ಆರೋಗ್ಯ ಅಂದುಕೊಳ್ಳಬೇಡಿ! ಬಾಲ್ಯದ ಬೊಜ್ಜಿನ ಬಗ್ಗೆ ಪೋಷಕರು ತಿಳಿದಿರಲೇಬೇಕಾದ ಕಹಿ ಸತ್ಯಗಳು..child over weight

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Child over weight: ಭಾರತೀಯರಲ್ಲಿ ಬೊಜ್ಜು ಈಗ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಮೊದಲು ವಯಸ್ಸಾದವರಲ್ಲಿ ಈ ಲಕ್ಷಣಗಳು ಕಂಡುಬರುತ್ತಿದ್ದವು. ಆದರೆ, ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲೇ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಈ ಎಲ್ಲಾದಕ್ಕೂ ಕಳಪೆ ಜೀವನಶೈಲಿ, ಜಂಕ್​ಫುಡ್​ ಅಭ್ಯಾಸ, ಒತ್ತಡವೇ ಕಾರಣ ಎಂದು ಹೇಳಲಾಗುತ್ತದೆ.
ಈ ಎಲ್ಲಾ ಸಮಸ್ಯೆಯಿಂದ ದೇಹದಲ್ಲಿ ತೂಕ ವೇಗವಾಗಿ ಹೆಚ್ಚಾಗುತ್ತದೆ. ಹಾಗಾಗಿ ಜನರು ಬೊಜ್ಜನ್ನು ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಆದರೆ, ಕೊಬ್ಬು ಕರಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಂದಹಾಗೇ, ಅತ್ಯಂತ ಆತಂಕಕಾರಿ ವಿಷಯವೆಂದರೆ, ಚಿಕ್ಕ ಮಕ್ಕಳು ಕೂಡಾ ಬೊಬ್ಬಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
2025 ರ ಯುನಿಸೆಫ್ ವರದಿಯ ಪ್ರಕಾರ, ಪ್ರಪಂಚದಾದ್ಯಂತ 20 ಮಕ್ಕಳಲ್ಲಿ ಒಬ್ಬರು ಅಂದರೆ, ಶೇ. 05 ರಷ್ಟು, ಮತ್ತು 5 ರಿಂದ 19 ವರ್ಷದೊಳಗಿನ 5 ಮಕ್ಕಳಲ್ಲಿ ಒಬ್ಬರು, ಅಥವಾ ಶೇಕಡಾ 20 ರಷ್ಟು ಬೊಜ್ಜು ಹೊಂದಿದ್ದಾರೆ. ಈ ವರದಿಯು 190 ಕ್ಕೂ ಹೆಚ್ಚು ದೇಶಗಳ ಡೇಟಾವನ್ನು ಆಧರಿಸಿದ್ದು, ಅಧಿಕ ತೂಕ ಹೊಂದಿರುವ ಜನರು ಕಡಿಮೆ ತೂಕ ಹೊಂದಿರುವ ಜನರನ್ನು ಮೀರಿಸಿದ್ದಾರೆ ಎಂದು ಫಲಿತಾಂಶ ನೀಡಿದೆ.

ಬಾಲ್ಯದ ಸ್ಥೂಲಕಾಯತೆಯ ಪರಿಣಾಮಗಳು

ಪ್ರಪಂಚ ಮುಂದುವರೆದಂತೆ ಚಿಕ್ಕ ಮಕ್ಕಳಲ್ಲಿ ಬೊಜ್ಜು ಕೂಡ ವೇಗವಾಗಿ ಹೆಚ್ಚಾಗುತ್ತಿದೆ. ಹಾಗೂ 10 ವರ್ಷದೊಳಗಿನ ಮಕ್ಕಳು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಇದು ಅವರ ಜೀವನಶೈಲಿ, ದೈಹಿಕ ಚಟುವಟಿಕೆಗಳಲ್ಲಿ ತೊಡಗದೇ ಇರುವುದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಯಕೃತ್ತಿನ ತಜ್ಞ ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶಿವ್ ಕುಮಾರ್ ಸರಿನ್ ಈ ಸಮಸ್ಯೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಪೋಷಕರು ತಮ್ಮ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಅಧಿಕ ತೂಕ ಹೊಂದುವುದನ್ನು ತಡೆಯಬೇಕೆಂದು ಸಲಹೆ ನೀಡಿದ್ದಾರೆ.
ಪೋಷಕರು ಯಾವಾಗಲೂ ದಪ್ಪಗಿರುವ ಮಕ್ಕಳನ್ನು ಇಷ್ಟಪಡುತ್ತಾರೆ, ಆದರೆ ಅವರ ಮಕ್ಕಳು ಅಧಿಕ ತೂಕ ಹೊಂದಬಾರದು ಹಾಗಾಗಿ ನಿಮ್ಮ ಮಕ್ಕಳನ್ನು ಫಿಟ್​ ಆಗಿರಿಸುವುದು, ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬೊಜ್ಜು ಮೂಳೆಗಳನ್ನು ದುರ್ಬಲಗೊಳಿಸುತ್ತದೆ

ಅಧಿಕ ತೂಕ ಹೊಂದಿರುವವರ ದೇಹದಲ್ಲಿ ಮೂಳೆಗಳು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ ಎಂದು ಡಾ. ಸರಿನ್ ಹೇಳಿದರು. ನಿಮ್ಮ ಮಗು ಅಧಿಕ ತೂಕ ಹೊಂದಿದ್ದರೆ, ಬೊಜ್ಜು ಕಾರಣದಿಂದಾಗಿ ಮಕ್ಕಳಲ್ಲಿ ಮೂಳೆಗಳು 2-3 ಪಟ್ಟು ದುರ್ಬಲಗೊಳ್ಳುತ್ತವೆ. ಇದರಿಂದ ಮೂಳೆಗಳು ಮುರಿತ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಆದಷ್ಟು ನಿಮ್ಮ ಮಕ್ಕಳಿಗೆ ವ್ಯಾಯಾಮ ಮಾಡಲು ತಿಳಿಸಿ. ಏಕೆಂದರೆ, ಹೆಚ್ಚು ಓಡಿದಷ್ಟು ಮೂಳೆಗಳು ಬಲಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಮೂಳೆ ವಯಸ್ಸು ಅತ್ಯಂತ ಮುಖ್ಯ, ಈ ವಯಸ್ಸಿನಲ್ಲಿ ಮೂಳೆಗಳು ದುರ್ಬಲವಾಗಲು ಬಿಡಬೇಡಿ. ಏಕೆಂದರೆ, ಪ್ರತಿಯೊಬ್ಬ ಮನುಷ್ಯನು 29 ವರ್ಷದ ನಂತರ ಅವನ ದೇಹದ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ, ಆದ್ದರಿಂದ ಅದಕ್ಕೂ ಮೊದಲು ಮೂಳೆಗಳನ್ನು ಬಲಪಡಿಸುವ ಬಗ್ಗೆ ವಿಶೇಷ ಗಮನ ನೀಡಬೇಕು.
ನಿಮ್ಮ ಎತ್ತರ 172 ಸೆಂಟಿಮೀಟರ್ ಆಗಿದ್ದರೆ, ನಿಮ್ಮ ತೂಕ 70 ಕಿಲೋಗ್ರಾಂ ಮೀರಬಾರದು ಎಂದು ಡಾ. ಸರಿನ್ ಹೇಳಿದ್ದಾರೆ. ಆದ್ದರಿಂದ, ನಿಮ್ಮ ಎತ್ತರಕ್ಕೆ ಸೂಕ್ತವಾದ ತೂಕವನ್ನು ಕಾಯ್ದುಕೊಳ್ಳುವುದು ಉತ್ತಮ. ಹಾಗಾಗಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಮಕ್ಕಳಲ್ಲಿ ಕೊಬ್ಬಿನ ಯಕೃತ್ತು ಹೆಚ್ಚಾಗುತ್ತದೆ

2025 ರಲ್ಲಿ ಭಾರತದಲ್ಲಿ ಮಕ್ಕಳು ಎಂಬ ಭಾರತ ಸರ್ಕಾರದ ವರದಿಯ ಪ್ರಕಾರ, 5 ರಿಂದ 9 ವರ್ಷದೊಳಗಿನ ಭಾರತೀಯ ಮಕ್ಕಳಲ್ಲಿ ಶೇ. 33 ರಷ್ಟು ಮಕ್ಕಳು ಹೆಚ್ಚಿನ ಟ್ರೈಗ್ಲಿಸರೈಡ್‌ಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಟ್ರೈಗ್ಲಿಸರೈಡ್‌ಗಳು ಆಹಾರದ ಕೊಬ್ಬಿನಿಂದ ಪಡೆದ ಒಂದು ರೀತಿಯ ಕೊಬ್ಬಾಗಿದ್ದು, ದೇಹದಲ್ಲಿ ಅಧಿಕವಾಗಿ ಸಂಗ್ರಹವಾದರೆ, ಅವು ರಕ್ತನಾಳಗಳನ್ನು ಮುಚ್ಚಿಹಾಕುತ್ತವೆ. ಜೊತೆಗೆ ಹೃದಯ ಅಪಧಮನಿಗಳನ್ನು ನಿರ್ಬಂಧಿಸಬಹುದು ಮತ್ತು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಕಾರಣವಾಗುತ್ತದೆ.

ಮಕ್ಕಳಲ್ಲಿ ಬೊಜ್ಜುತನವನ್ನು ಹೇಗೆ ತಡೆಯಬಹುದು?

1. ಮಹಿಳೆಯರು ಗರ್ಭ ಧರಿಸಿದ ಸಂದರ್ಭದಲ್ಲಿ ತಮ್ಮ ತೂಕ ಮತ್ತು ಸಕ್ಕರೆ ಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇದರಿಂದ ಮಗು ಅಧಿಕ ತೂಕ ಹೊಂದುವುದಿಲ್ಲ.
2. ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಪೌಷ್ಟಿಕಾಂಶ ತುಂಬಿದ ಸರಳ ಊಟವನ್ನು ನೀಡಬೇಕು.
3. ಮಗುವಿಗೆ 3 ವರ್ಷದವರೆಗೆ ಸಕ್ಕರೆ ನೀಡದಿದ್ದರೆ, ಅವರ ಹೃದಯ ಮತ್ತು ಯಕೃತ್ತು ದೀರ್ಘಕಾಲದವರೆಗೆ ಆರೋಗ್ಯಕರವಾಗಿರುತ್ತದೆ.
4. ನಿಮ್ಮ ಮಗುವಿನ ತೂಕ 5 ವರ್ಷದವರೆಗೆ ಸಮತೋಲನದಲ್ಲಿದ್ದರೆ, ಭವಿಷ್ಯದಲ್ಲಿ ಯಕೃತ್ತು ಮತ್ತು ಚಯಾಪಚಯ ರೋಗಗಳ ಅಪಾಯವು ಬಹಳ ಕಡಿಮೆಯಾಗುತ್ತದೆ.
5. ಮಕ್ಕಳಿಗೆ ಕನಿಷ್ಠ 7 ರಿಂದ 9 ಗಂಟೆಗಳ ನಿದ್ದೆ ಮಾಡಲು ಬಿಡಬೇಕು. ಇದು ನಿದ್ರೆಯ ಕೊರತೆಯನ್ನು ನೀಗಿಸುತ್ತದೆ. ಇಲ್ಲದಿದ್ದರೆ, ಹಸಿವಿನ ಹಾರ್ಮೋನುಗಳಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ, ಇದು ಮಗುವನ್ನು ಹೆಚ್ಚು ತಿನ್ನುವಂತೆ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net