ದಿನನಿತ್ಯ ಈ ಐದು ಕೆಲಸಗಳನ್ನು ಮಾಡಿದರೆ ಯಾವುದೇ ಕಾರಣಕ್ಕೂ ನಿಮ್ಮ ಬಳಿ ಸುಳಿಯಲ್ಲ ಮಧುಮೇಹ! Diabetes

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅನ್ನೋದು ಈಗ ಎಲ್ಲ ವಯಸ್ಸಿನವರಲ್ಲೂ ಸಾಮಾನ್ಯವಾಗಿ ಕಾಡುತ್ತಿದೆ
  • ಒಮ್ಮೆ ಈ ಕಾಯಿಲೆ ಅಂಟಿದರೆ ಸಾಕು ಇದಕ್ಕೆ ಯಾವುದೇ ರೀತಿಯ ಮದ್ದು ಇಲ್ಲ
  • ಈಗೀಗ ಮಧುಮೇಹ ಕಾಯಿಲೆಯ ಗಂಭೀರತೆ ಜನರಿಗೆ ಅರಿವಾಗ ತೊಡಗಿದೆ
  • ಈ ಐದು ಕೆಲಸಗಳನ್ನು ನಿತ್ಯವು ಮಾಡಿದರೆ ಮಧುಮೇಹ ರೋಗ ನಿಮ್ಮ ಬಳಿ ಸುಳಿಯವುದಿಲ್ಲ
Diabetes : ಮಧುಮೇಹ ( Diabetes ) ಅಥವಾ ಸಕ್ಕರೆ ಕಾಯಿಲೆ ಅನ್ನೋದು ಮೊದಲೆಲ್ಲ 40ರ ಗಡಿ ದಾಟಿದವರಲ್ಲಿ ಬರುವ ಸಾಮಾನ್ಯ ಕಾಯಿಲೆಯೆಂದು ಕರೆಯಲಾಗುತ್ತಿತ್ತು. ಒಮ್ಮೆ ಈ ಕಾಯಿಲೆ ಅಂಟಿದರೆ ಸಾಕು ಇದಕ್ಕೆ ಯಾವುದೇ ಮದ್ದಿಲ್ಲ. ಸಾಯುವವರೆಗೆ ನೆಚ್ಚಿನ ಸಿಹಿ ಪದಾರ್ಥಗಳು ಹಾಗೂ ಆಹಾರ ತಿನಿಸುಗಳನ್ನು ಸೇವಿಸುವಂತಿಲ್ಲ. ಈ ಮೊದಲು ಹಿರಿಯರಲ್ಲಿ ಮಾತ್ರ ಕಾಡುತ್ತಿದ್ದ ಈ ಆರೋಗ್ಯ ಸಮಸ್ಯೆ ಇದೀಗ ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಹೀಗಾಗಿ ಈ ಕಾಯಿಲೆಯ ಗಂಭೀರತೆ ಇದೀಗ ಜನರಿಗೆ ಅರಿವಾಗ ತೊಡಗಿದೆ.
ಈ ರೋಗ ತಗುಲಿದಾಗ ಪರಿಹಾರಕ್ಕಾಗಿ ಅಲೆದಾಡುವ ಬದಲು ಈ ಐದು ಕೆಲಸಗಳನ್ನು ದಿನನಿತ್ಯ ಮಾಡಿದರೆ ಮಧುಮೇಹ ರೋಗ ನಿಮ್ಮ ಬಳಿ ಸುಳಿಯವುದು ತೀರಾ ಕಡಿಮೆ. ಹಾಗಾದರೆ ಆ ಐದು ಕೆಲಸಗಳೇನು ಎಂಬುದನ್ನು ನಾವೀಗ ತಿಳಿಯೋಣ ಬನ್ನಿ.

ಊಟದ ನಂತರ 10 ನಿಮಿಷಗಳ ನಡಿಗೆ

ಊಟವಾದ 30 ರಿಂದ 60 ನಿಮಿಷಗಳ ನಂತರ ಹತ್ತು ನಿಮಿಷದ ನಡಿಗೆಯು ದೇಹದಲ್ಲಿ ಗ್ಲೂಕೋಸ್​ನ್ನು ಸುಮಾರು 20 mg/dL ರಷ್ಟು ಕಡಿಮೆ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾಗುವುದನ್ನು ಕಡಿಮೆ ಮಾಡಬಹುದಾಗಿದೆ. ಊಟದ ನಂತರ ನಡಿಗೆಯಿಂದ HbA1c ಅನ್ನು ಸರಿಸುಮಾರು 0.5 ರಿಂದ 0.7 ರಷ್ಟು ಕಡಿಮೆ ಮಾಡಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.

ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳದಿರುವುದು

ಆಧುನಿಕ ಕೆಲಸದ ಜೀವನವು ಚಯಾಪಚಯ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದು, ನಾವು ತುಂಬಾ ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದರಿಂದ ಗ್ಲೂಕೋಸ್ ಕ್ಲಿಯರೆನ್ಸ್ ನಿಧಾನವಾಗುತ್ತದೆ. ಆದ್ದರಿಂದ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಪ್ರತಿ 20 ರಿಂದ 30 ನಿಮಿಷಗಳಿಗೊಮ್ಮೆ 1 ರಿಂದ 2 ನಿಮಿಷಗಳ ಲಘು ಚಲನೆ ಮಾಡಿದರೆ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ವಾರಕ್ಕೆ ಎರಡರಿಂದ ಮೂರು ಬಾರಿ ಕಠಿಣ ವ್ಯಾಯಾಮ ಮಾಡಿ

ಸ್ನಾಯುಗಳು ಗ್ಲೂಕೋಸ್ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಹೆಚ್ಚು ಸ್ನಾಯು ಹೊಂದಿದ್ದರೆ, ದೇಹವು ರಕ್ತದಿಂದ ಸಕ್ಕರೆಯನ್ನು ತೆರವುಗೊಳಿಸುತ್ತದೆ. ಆದ್ದರಿಂದ ದೇಹದಲ್ಲಿ ಹೆಚ್ಚಿನ ಸ್ನಾಯುವನ್ನು ಹೊಂದಲು ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ಕಠಿಣ ವ್ಯಾಯಾಮ ಮಾಡಿ.

ಆಹಾರ ಶೈಲಿಯ ಬದಲಾವಣೆ

ಆಹಾರವೇ ಆರೋಗ್ಯ ಎಂಬ ನಾಣ್ಣುಡಿಯಂತೆ ದೇಹದಲ್ಲಿ ಏನೇ ಬದಲಾವಣೆಯಾಗಬೇಕಾದರೆ ಮೊದಲು ಆಹಾರ ಶೈಲಿಯಲ್ಲಿ ಬದಲಾವಣೆ ತರಬೇಕು. ತರಕಾರಿಗಳು, ದ್ವಿದಳ ಧಾನ್ಯಗಳು, ಧಾನ್ಯಗಳು, ಬೀಜಗಳು, ಆಲಿವ್ ಎಣ್ಣೆ ಹಾಗೂ ಪ್ರೋಟೀನ್​ಗಳ ಸೇವನೆ HbA1c ಅನ್ನು ಕಡಿಮೆ ಮಾಡುತ್ತವೆ. ಈ ರೀತಿಯ ತಿನ್ನುವ ಶೈಲಿಯು ಊಟದಿಂದ ಸಕ್ಕರೆ ಬಿಡುಗಡೆ ನಿಧಾನಗೊಳಿಸಿ ಶಕ್ತಿಯನ್ನು ಸ್ಥಿರಗೊಳಿಸುತ್ತದೆ. ಕರುಳಿನ ಸೂಕ್ಷ್ಮಜೀವಿಯನ್ನು ಪೋಷಿಸಿ, ಉರಿಯೂತವನ್ನು ಕಡಿಮೆ ಮಾಡುತ್ತದೆ. ತಿನ್ನುವ ತಟ್ಟೆಯಲ್ಲಿ ಅರ್ಧದಷ್ಟು ತರಕಾರಿಗಳನ್ನು ಸೇರಿಸಿಕೊಳ್ಳುವುದು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಬದಲಿಗೆ ಧಾನ್ಯಗಳನ್ನು ಬಳಸುವುದು, ಆಲಿವ್ ಅಥವಾ ಸಾಸಿವೆ ಎಣ್ಣೆಯಿಂದ ಅಡುಗೆ ಮಾಡುವ ಮೂಲಕ ಸಕ್ಕರೆ ಕಾಯಿಲೆಯ ಅಪಾಯವನ್ನು ತಪ್ಪಿಸಬಹುದು.

ಸರಿಯಾದ ನಿದ್ರೆ

ನಿದ್ರೆಯು ಗ್ಲೂಕೋಸ್ ಅನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಹೇಳಲಾಗದು ಆದರೆ, 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ HbA1c ಹೆಚ್ಚಾಗುತ್ತದೆ. ಅನಿಯಮಿತ ನಿದ್ರೆಯ ಮಾದರಿಗಳು ಗ್ಲೂಕೋಸ್ ವ್ಯತ್ಯಾಸವನ್ನು ಹೆಚ್ಚಿಸುತ್ತವೆ. ಸ್ಥಿರವಾದ ನಿದ್ರೆಯ ಮಾದರಿಗಳು HbA1c ಅನ್ನು 0.1 ರಿಂದ 0.3 ಶೇಕಡಾವಾರು ಅಂಕಗಳಿಂದ ಸುಧಾರಿಸಬಹುದು ಮತ್ತು ಇತರ ಎಲ್ಲಾ ಅಭ್ಯಾಸಗಳ ಪರಿಣಾಮವನ್ನು ಹೆಚ್ಚಿಸಬಹುದು. ಆದ್ದರಿಂದ ಪ್ರತಿದಿನ 7 ರಿಂದ 9 ಗಂಟೆಗಳ ಕಡ್ಡಾಯ ನಿದ್ರೆ ಮಾಡುವುದು ಅತ್ಯಗತ್ಯ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಒದಗಿಸಲಾಗಿದೆ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ತಡೆಗಟ್ಟಲು ಆಯುರ್ವೇದ ಅಥವಾ ಅಲೋಪತಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net