ಒಂದು ದಿನವು ತಪ್ಪಿಸದೇ ಒಂದು ತಿಂಗಳು ಓಂಕಾಳು ನೀರನ್ನು ಕುಡಿದರೆ ಇಷ್ಟೆಲ್ಲ ಲಾಭವಿದೆಯಾ? Ajwain Water

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯದ ವಿಚಾರದಲ್ಲಿ ಅನೇಕ ಮನೆಗಳಲ್ಲಿ ಇಂದಿಗೂ ಹಳೆಯ ಪದ್ಧತಿ ಅನುಸರಿಸುತ್ತಾ ಬರುತ್ತಿದ್ದಾರೆ
  • ನಮ್ಮ ತಾಯಂದಿರು ಮತ್ತು ಅಜ್ಜಿಯರು ಮನೆಯಲ್ಲೇ ಸರಳ ಪರಿಹಾರಗಳನ್ನು ಮಾಡಿಕೊಳ್ಳುತ್ತಿದ್ದಾರೆ
  • ಹೊಟ್ಟೆ ಕಿರಿಕಿರಿಗೆ ಹೆಚ್ಚಿನ ಅಡುಗೆಮನೆಗಳಲ್ಲಿ ಯಾವಾಗಲೂ ಒಂದು ವಸ್ತು ರೆಡಿಯಾಗಿರುತ್ತದೆ
Ajwain Water : ಆರೋಗ್ಯ ಕಾಪಾಡಿಕೊಳ್ಳುವ ವಿಚಾರದಲ್ಲಿ ಅನೇಕ ಮನೆಗಳಲ್ಲಿ ಇಂದಿಗೂ ಹಳೆಯ ಪದ್ಧತಿಗಳನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಆರೋಗ್ಯ ಮಹತ್ವದ ಸುದ್ದಿಗಳು ಅಂತರ್ಜಾಲವನ್ನು ಆಕ್ರಮಿಸಿಕೊಳ್ಳುವ ಮುನ್ನವೇ ನಮ್ಮ ತಾಯಂದಿರು ಮತ್ತು ಅಜ್ಜಿಯರು ಮನೆಯಲ್ಲೇ ಸರಳ ಪರಿಹಾರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಡವಾಗಿ ಊಟ ಮಾಡಿದ ನಂತರ ಅನುಭವಿಸುವ ಉಬ್ಬುವಿಕೆ, ಅಸಿಡಿಟಿ ಅಥವಾ ಹೊಟ್ಟೆ ಭಾರವಾದ ಕಿರಿಕಿರಿ ಉಂಟಾದಾಗ ಅದನ್ನು ಶಮನಗೊಳಿಸಲು ಹೆಚ್ಚಿನ ಅಡುಗೆಮನೆಗಳಲ್ಲಿ ಯಾವಾಗಲೂ ಒಂದು ವಸ್ತು ರೆಡಿಯಾಗಿರುತ್ತಿತ್ತು. ಅದುವೇ ಓಂಕಾಳು.
ಹೌದು, ತಲೆಮಾರುಗಳಿಂದ ಒಂದು ಕಪ್ ಬೆಚ್ಚಗಿನ ಓಂಕಾಳು ನೀರನ್ನು ಜೀರ್ಣಕಾರಿ ಸಮಸ್ಯೆಗೆ ಪರಿಹಾರವಾಗಿ ಬಳಸಲಾಗುತ್ತಿದೆ. ಇಂದಿನ ಆಧುನಿಕ ಸಂಶೋಧನೆಯು ಗಿಡಮೂಲಿಕೆಗಳ ಕಷಾಯದ ಹಿಂದಿನ ವಿಜ್ಞಾನವನ್ನು ಅನ್ವೇಷಿಸುತ್ತಲೇ ಇದ್ದರು ಕೂಡ ಈ ಸಾಂಪ್ರದಾಯಿಕ ಜೀರ್ಣಕಾರಿ ಪರಿಹಾರ ಮೊದಲ ಆದ್ಯತೆಯಾಗಿಯೇ ನಮ್ಮ ಮಧ್ಯೆ ಉಳಿದಿದೆ. ನಿಮಗೆ ಗೊತ್ತಾ? ಒಂದು ದಿನವೂ ತಪ್ಪಿಸದೇ ಒಂದು ತಿಂಗಳು ಪ್ರತಿ ರಾತ್ರಿ ಓಂಕಾಳು ನೀರನ್ನು ಕುಡಿದರೆ ನಿಮ್ಮ ದೇಹದಲ್ಲಿ ಒಂದು ಚಮತ್ಕಾರವೇ ನಡೆಯಲಿದೆ. ಆ ಚಮತ್ಕಾರಗಳು ಏನು ಅನ್ನೋದನ್ನು ನಾವೀಗ ತಿಳಿಯೋಣ.

ಮೊದಲ ವಾರ : ಜೀರ್ಣಕ್ರಿಯೆಯ ಸಮಸ್ಯೆಗಳು ಕಡಿಮೆಯಾಗುತ್ತದೆ

ಮೊದಲ ವಾರದಲ್ಲಿ, ಊಟದ ನಂತರ ಗ್ಯಾಸ್​, ಉಬ್ಬುವಿಕೆ ಮತ್ತು ಹೊಟ್ಟೆ ಭಾರವಾದ ಭಾವನೆಯಲ್ಲಿ ಸ್ವಲ್ಪ ರಿಲೀಫ್​ ಕಂಡುಬರುತ್ತದೆ. ಓಂಕಾಳಿನಲ್ಲಿ ಥೈಮೋಲ್ ಇದ್ದು, ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಸಂಯುಕ್ತವಾಗಿದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಎರಡನೇ ವಾರ : ರಾತ್ರಿಯ ಅಸಿಡಿಟಿ ಕ್ರಮೇಣ ಕಡಿಮೆಯಾಗುತ್ತದೆ

ಎರಡನೇ ವಾರದ ಹೊತ್ತಿಗೆ, ಅನೇಕ ಜನರು ತಡರಾತ್ರಿ ಅನುಭವಿಸುವ ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ. ಏಕೆಂದರೆ, ಓಂಕಾಳಿನಲ್ಲಿ ಕಾರ್ಮಿನೇಟಿವ್ ಮತ್ತು ಉತ್ತೇಜಕ ಗುಣಗಳನ್ನು ಹೊಂದಿದ್ದು, ಇದು ಅಜೀರ್ಣ, ಅನಿಲ, ಸೆಳೆತ ಮತ್ತು ವಾಕರಿಕೆ ಮುಂತಾದ ಲಕ್ಷಣಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಓಂಕಾಳು ನೀರು ಹೆಚ್ಚಾಗಿ ಹಿತಕರ ಮತ್ತು ಬೆಚ್ಚಗಿರುವುದರಿಂದ ಎಣ್ಣೆಯುಕ್ತ ಅಥವಾ ಭಾರಿ ಭೋಜನದ ನಂತರ ಉಂಟಾಗುವ ಅಹಿತಕರ ಉಬ್ಬುವಿಕೆ ಅಥವಾ ಸುಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೂರನೇ ವಾರ : ಹೊಟ್ಟೆ ಉಬ್ಬುವಿಕೆ ನಿವಾರಣೆ

ಓಂಕಾಳು ಸೌಮ್ಯ ಮೂತ್ರವರ್ಧಕ ಪರಿಣಾಮವನ್ನು ಹೊಂದಿದ್ದು ಇದು ದೇಹವು ಹೆಚ್ಚುವರಿ ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸರಾಗವಾದಂತೆ, ಬೆಳಗ್ಗೆ ಹೊಟ್ಟೆಯಲ್ಲಿ ಹಗುರವಾದ ಅನುಭವವಾಗುತ್ತದೆ ಮತ್ತು ಊಟದ ನಂತರ ಅಸ್ವಸ್ಥತೆ ಕಡಿಮೆಯಾಗುತ್ತದೆ.

ನಾಲ್ಕನೇ ವಾರ : ಜೀರ್ಣಕ್ರಿಯೆ ಮೇಲೆ ಹೆಚ್ಚಿನ ನಿಯಂತ್ರಣ

ನಾಲ್ಕನೇ ವಾರದ ವೇಳೆಗೆ, ಓಂಕಾಳು ನೀರು ಹೆಚ್ಚು ಪರಿಣಾಮ ಬೀರುತ್ತದೆ. ರಾತ್ರಿಯ ವೇಳೆ ನಿಯಮಿತವಾಗಿ ಓಂಕಾಳು ನೀರು ಸೇವನೆಯು ಸುಗಮ ಕರುಳಿನ ಚಲನೆಯನ್ನು ಉತ್ತೇಜಿಸಲು, ಊಟದ ನಂತರ ಉಬ್ಬುವಿಕೆ ಕಡಿಮೆಯಾಗಲು ಮತ್ತು ಅಸ್ವಸ್ಥತೆ ನಿವಾರಣೆಯಾಗಲು ಸಹಾಯ ಮಾಡುತ್ತದೆ. ಹೊಟ್ಟೆ ಹಗುರವಾಗಿರುವ ಕಾರಣ ಬೆಳಗ್ಗೆ ಹೆಚ್ಚು ಶಕ್ತಿಯುತವಾಗಿರಲು ಸಹಕಾರಿಯಾಗಿರುತ್ತದೆ.

ಮನೆಯಲ್ಲಿ ಓಂಕಾಳು ನೀರನ್ನು ತಯಾರಿಸುವುದು ಹೇಗೆ?

ಒಂದು ಕಪ್ ನೀರಿಗೆ ½ ಟೀ ಚಮಚ ಓಂಕಾಳು ಬೀಜಗಳನ್ನು ಸೇರಿಸಿ. ನೀರು ಸ್ವಲ್ಪ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ 4 ರಿಂದ 5 ನಿಮಿಷಗಳ ಕಾಲ ಕುದಿಸಿ. ಇದಾದ ಬಳಿಕ ಪಾತ್ರೆಯನ್ನು ಮುಚ್ಚಿ, ಗರಿಷ್ಠ ಸುವಾಸನೆ ಬರುವವರೆಗೂ ಸುಮಾರು 5 ನಿಮಿಷಗಳ ಕಾಲ ಅದನ್ನು ನೆನೆಸಲು ಬಿಡಿ. ಬಳಿಕ ಅದನ್ನು ಸೋಸಿ ಕುಡಿಯಿರಿ.

ಓಂಕಾಳು ನೀರು ಕುಡಿಯುವಾಗ ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು...

1. ತುಂಬಾ ಬಿಸಿಯಾಗಿ ಕುಡಿಯುವುದನ್ನು ತಪ್ಪಿಸಿ, ಏಕೆಂದರೆ ಇದು ಹೊಟ್ಟೆಯ ಒಳಪದರಕ್ಕೆ ಹಾನಿ ಮಾಡಬಹುದು.

2. ಹೆಚ್ಚು ಬೀಜಗಳನ್ನು ಬಳಸಬೇಡಿ.

3. ಮಸಾಲೆಯುಕ್ತ ಊಟದ ನಂತರ ಓಂಕಾಳು ನೀರನ್ನು ಕುಡಿಯಬೇಡಿ.

4. ಮುಖ್ಯವಾಗಿ, ಯಾವುದೇ ಕಾರಣಕ್ಕೂ ತ್ವರಿತ ಫಲಿತಾಂಶಗಳನ್ನು ನಿರೀಕ್ಷಿಸಬೇಡಿ. ಏಕೆಂದರೆ, ಓಂಕಾಳಿನ ಪರಿಹಾರವು ನಿಧಾನ ಮತ್ತು ದೈನಂದಿನ ಸ್ಥಿರತೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಒದಗಿಸಲಾಗಿದೆ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ತಡೆಗಟ್ಟಲು ಆಯುರ್ವೇದ ಅಥವಾ ಅಲೋಪತಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net