

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಿದೆ. ಜನಜೀವನವೂ ಬಹುತೇಕ ಸಹಜ ಸ್ಥಿತಿಗೆ ಮರಳಿದೆ. ಇಂದು ಗಣೇಶ ಚೌತಿಯನ್ನೂ ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಹಾಗೇ ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಇಂದು ಎರಡು ಸಿಹಿ ವಿಚಾರವನ್ನೂ ತಿಳಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 69, 878 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29, 75, 702ಕ್ಕೆ ಏರಿದೆ. ಆದರೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ದೇಶದಲ್ಲಿ ಕರೊನಾದಿಂದ ಸಾಯುತ್ತಿರುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಚೇತರಿಕೆಯ ಪ್ರಮಾಣವೂ ಅಧಿಕವಾಗಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ಇದನ್ನೂ ಓದಿ: ಎರಡು ವರ್ಷಕ್ಕೂ ಮುನ್ನ ಅಂತ್ಯವಾಗಲಿದೆ ಕೋವಿಡ್ ಸಂಕಷ್ಟ; ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ
ದೇಶದಲ್ಲಿ ಕರೊನಾ ಚೇತರಿಕೆಯ ದರ ಶೇ.75ಕ್ಕೆ ಏರಿಕೆಯಾಗಿದೆ ಹಾಗೂ ಸಾವಿನ ಪ್ರಮಾಣ 1.87ಕ್ಕೆ ಇಳಿಕೆಯಾಗಿದೆ. ಕರೊನಾ ವಿರುದ್ಧ ಹೋರಾಟದಲ್ಲಿ ಭಾರತ ಜಗತ್ತಿನ ಇತರ ದೇಶಗಳಿಗಿಂತಲೂ ಮುಂಚೂಣಿಯಲ್ಲಿದೆ, ಉತ್ತಮ ವಿಧಾನಗಳನ್ನು ಅಳವಡಿಸಿಕೊಂಡಿದೆ ಎಂಬುದಕ್ಕೆ ಕರೊನಾ ಚೇತರಿಕೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದೇ ಸಾಕ್ಷಿ ಎಂದು ಹೇಳಿದ್ದಾರೆ.
ಕಳೆದ 24ಗಂಟೆಯಲ್ಲಿ 945 ಸೋಂಕಿತರು ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ 55,794ಕ್ಕೆ ಏರಿಕೆಯಾಗಿದೆ. ಸದ್ಯ ಸಕ್ರಿಯ ಕರೊನಾ ಪ್ರಕರಣಗಳು 6,97,330 ಆಗಿದೆ.
ಹಾಗೇ, ಕರೊನಾದಿಂತ ಅತಿ ಹೆಚ್ಚು ಬಾಧಿತವಾದ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಹೀಗಿರುವಾಗ ಹರ್ಷವರ್ಧನ್ ಇನ್ನೊಂದು ಸಿಹಿ ಸುದ್ದಿ ಹೇಳಿದ್ದು, ಹೈದರಾಬಾದ್ ಮೂಲದ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್ ಲಸಿಕೆ ಈ ವರ್ಷದ ಕೊನೆಯಲ್ಲಿ ಬಳಕೆಗೆ ಸಿಗುವ ಭರವಸೆಯನ್ನೂ ನೀಡಿದ್ದಾರೆ. (ಏಜೆನ್ಸೀಸ್)