ರಾಜ್ಯದಲ್ಲಿ ಕಾಟನ್​ ಕ್ಯಾಂಡಿ ಬ್ಯಾನ್​​: ದಿನೇಶ್ ಗುಂಡೂರಾವ್

cotton candy
Published on

ಬೆಂಗಳೂರು: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕೆಮಿಕಲ್​ ಇದೆ ಎನ್ನುವ ಕಾರಣಕ್ಕಾಗಿ ಈಗಾಗಲೇ ಹೊರರಾಜ್ಯಗಳಲ್ಲಿ ಬ್ಯಾನ್​​ ಮಾಡಲಾಗಿದೆ. ಇದೀಗ ಕರ್ನಾಟಕದಲ್ಲಿಯೂ ಕಲರ್ ಕಾಟನ್​ ಕ್ಯಾಂಡಿ ಮಾರಾಟ ಮಾಡುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಕಲಬೆರಕೆ ಕಲರ್ ಬಳಕೆ ಮಾಡೋದು ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬೆರಕೆ ಹಿನ್ನೆಲೆ ಈ ಹಿಂದೆ ವಿವಿಧ ಸ್ಯಾಂಪಲ್ ಗಳ ಪರೀಕ್ಷೆಗೆ ನೀಡಲಾಗಿತ್ತು. ಸದ್ಯ ಪರೀಕ್ಷೆಯ ವರದಿ ಬಂದ ಹಿನ್ನೆಲೆ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ಧಿಗೋಷ್ಠಿ ನಡೆಸಿ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ರಾಜ್ಯದಲ್ಲಿ ಅಪಾಯಕಾರಿಯಾದ ಕಾಟನ್ ಕ್ಯಾಂಡಿ ಬ್ಯಾನ್ ಮಾಡಲಾಗಿದೆ. ಇನ್ನು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ. ಕಲರ್​ ಕಾಟನ್​ ಕ್ಯಾಂಡಿ ಮಾರಾಟ ಮಾಡುವಂತೆ ಇಲ್ಲ. ಒಂದು ವೇಳೆ ಮಾರಾಟ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಲರ್​ ಬಳಸದೆ ಮಾಡಿದ ಕ್ಯಾಂಡಿ ಮಾರಾಟಕ್ಕೆ ಮಾತ್ರ ಅವಕಾಶ ಇರುತ್ತದೆ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.

ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ನಿಷೇಧ ಉಲ್ಲಂಘಿಸಿದಲ್ಲಿ 7 ವರ್ಷಗಳವರೆಗೆ ಜೈಲು ಹಾಗು 10 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಕಾಟನ್ ಕ್ಯಾಂಡಿಯ ಸಂಗ್ರಹಿಸಲಾದ 25 ಮಾದರಿಗಳಲ್ಲಿ, 15 ಮಾದರಿಗಳಲ್ಲಿ ಕೃತಕ ಬಣ್ಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ ಹಾಗು ಕಾಟನ್ ಕ್ಯಾಂಡಿಗಳಲ್ಲಿ ರೋಡಮೈನ್-ಬಿ ಸೇರಿದಂತೆ ನಿಷೇಧಿತ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಕೃತಕ ಬಣ್ಣಗಳನ್ನು ಬಳಸುವ ತಿಂಡಿ ತಿನಿಸುಗಳನ್ನು ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಕಾನ್ಸರ್'ಗೆ ತುತ್ತಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರೂ ಸಹ ಇಂತಹವುಗಳ ಬಗ್ಗೆ ಎಚ್ಚರ ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net