

ಪಡುಬಿದ್ರಿ: ನಮ್ಮ ದೈನಂದಿನ ಚಟುವಟಿಕೆ ವ್ಯವಸ್ಥಿತವಾಗಿ ನಡೆಯಲು ಆರೋಗ್ಯವೇ ಮುಖ್ಯ. ದಂತ ಆರೋಗ್ಯ ಕಾಪಾಡಿಕೊಂಡರೆ ದೈಹಿಕ ಆರೋಗ್ಯವೂ ಉತ್ತಮವಾಗುವುದು. ಬಾಯಿ ಆರೋಗ್ಯವೇ ದೈಹಿಕ ಆರೋಗ್ಯಕ್ಕೆ ಕೈಗನ್ನಡಿ ಎಂದು ಶಿರ್ವ ಸಮುದಾಯ ಆರೋಗ್ಯ ಕೇಂದ್ರ ದಂತ ಆರೋಗ್ಯಾಧಿಕಾರಿ ಡಾ.ಗಾಯತ್ರಿ ಸಂತೋಷ್ ಹೇಳಿದರು.
ಶಿರ್ವ ಸಮುದಾಯ ಆರೋಗ್ಯ ಕೇಂದ್ರ, ಬೆಳಪು ಆಯುಷ್ಮಾನ್ ಆರೋಗ್ಯ ಮಂದಿರ, ಬೆಳಪು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎನ್ನೆಸ್ಸೆಸ್, ಯುವ ರೆಡ್‌ಕ್ರಾಸ್ ಘಟಕ ಸಹಭಾಗಿತ್ವದಲ್ಲಿ ಬೆಳಪುವಿನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಮಾಹಿತಿ, ದಂತ ತಪಾಸಣೆ, ಎಚ್‌ಐವಿ/ಏಡ್ಸ್ ಬಗ್ಗೆ ಮಾಹಿತಿ, ರಕ್ತ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಪ್ರಭಾರ ಪ್ರಾಂಶುಪಾಲೆ ಮಮತಾ ಮಾತನಾಡಿ, ಕೆಟ್ಟ ಸಹವಾಸದಿಂದ ದೂರವಿದ್ದು, ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ವಸಂತಿ ಎಚ್‌ಐವಿ/ಏಡ್ಸ್ ಬಗ್ಗೆ ಮಾಹಿತಿ ನೀಡಿದರು. ಬೆಳಪು ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ದಿವ್ಯಾ, ಉಪನ್ಯಾಸಕರಾದ ಧರಣೇಂದ್ರ ವೈ.ಟಿ., ಸುನೀಲ್ ಕುಮಾರ್, ಬಸಪ್ಪ, ರಂಜನ್ ಉಪಸ್ಥಿತರಿದ್ದರು. ವಂದನಾ ಆರ್.ಪಿ. ವಂದಿಸಿದರು.