

ಕುಂದಾಪುರ: ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಬಾರದೆಂದು ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ತಡೆಯೊಡ್ಡಿರುವುದಾಗಿ ಶಾಲೆ ಮುಖ್ಯ ಶಿಕ್ಷಕಿ ಇಬ್ಬರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಪ್ಪಿನಕುದ್ರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿಯಾಗಿರುವ ಮಾಲತಿ ವಿ. ದೂರು ನೀಡಿದ್ದು, ತಾನು ಶಾಲೆಯಲ್ಲಿ ಮುಂದುವರಿಯಬಾರದೆಂದು ಉಮೇಶ ಎಂ.ಉಪ್ಪಿನಕುದ್ರು ಮತ್ತು ಸಹಶಿಕ್ಷಕಿ ನಂದಾ ಎನ್.ವಿ. ಸುಳ್ಳು ಆರೋಪ ಮಾಡಿ ಮೇಲಾಧಿಕಾರಿಗೆ ದೂರು ನೀಡಿದ್ದಾರೆ. ನ.14ರಂದು ಎಸ್ಡಿಎಂಸಿ ಸಭೆ ಕರೆದು ಹೊರಗೆ ಕಳುಹಿಸಿದ್ದರು. ಉಮೇಶ ಅವರು ವಿದ್ಯಾರ್ಥಿಗಳ ಹಾಗೂ ಪಾಲಕರ ಸಮ್ಮುಖ ಮಾನಹಾನಿಕಾರಕವಾಗಿ ನಿಂದಿಸಿದ್ದಾರೆ. ಡಿ.13ರಂದು ಶಾಲೆ ಮಕ್ಕಳನ್ನು ಪ್ರಚೋದಿಸಿ ತಮ್ಮ ವಿರುದ್ಧ ಘೋಷಣೆ ಕೂಗಿ ಬೆದರಿಕೆಯೊಡ್ಡಿದ್ದಾರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಒತ್ತಯಾಪೂರ್ವಕವಾಗಿ ಮಾಲತಿ ಅವರನ್ನು ರಜೆಯಲ್ಲಿ ಕಳುಹಿಸುವಂತೆ ಮಾಡಿದ್ದಾರೆ. ರಜೆ ಮುಗಿಸಿ ಶಾಲೆಗೆ ವಾಪಸ್ ಬಂದಾಗ ನಂದಾ ಅವರ ಪ್ರಚೋದನೆಯಿಂದ ಶಾಲೆಯ ಮಕ್ಕಳು ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮುಖ್ಯ ಶಿಕ್ಷಕಿ ಮಾಲತಿ ವಿ. ವಿರುದ್ಧ ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾಲತಿ ವಿ. ನ.13ರಂದು ಶಾಲಾ ಅಕ್ಷರ ದಾಸೋಹ ದಾಖಲಾತಿಯಲ್ಲಿ ತಪ್ಪು ಹಾಜರಿ ನೀಡಿ ಹಣ ಅವ್ಯವಹಾರ ಮಾಡಿರುವುದನ್ನು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಶಾಲೆ ಸಂದರ್ಶನದಲ್ಲಿ ಗಮನಿಸಿದ್ದು, ತಪ್ಪು ಹಾಜರಿ ಹಾಕಿದ ಕುರಿತು ಮುಖ್ಯಶಿಕ್ಷಕರು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದರು. ಮುಖ್ಯ ಶಿಕ್ಷಕರು ಶಾಲೆಗೆ ಬರುವುದು ಬೇಡ ಎಂದು ವಿದ್ಯಾರ್ಥಿಗಳು ಮುಷ್ಕರ ಮಾಡಿದಾಗ ಮುಖ್ಯ ಶಿಕ್ಷಕರು ರಜೆ ಮೇಲೆ ತೆರಳಲು ಒಪ್ಪಿಗೆ ನೀಡಿದ್ದು, ರಜೆಯ ಅರ್ಜಿ ವಾಪಸ್ ಪಡೆದು ಶಾಲೆಗೆ ಬಂದಿರುವುದರಿಂದ ಮತ್ತೆ ವಿದ್ಯಾರ್ಥಿಗಳು ಮುಷ್ಕರ ನಡೆಸಿದ್ದಾರೆ. ಈ ಕುರಿತು ವಿದ್ಯಾರ್ಥಿಗಳ ಮುಷ್ಕರ ನಿಯಂತ್ರಿಸಲು ಜಿಲ್ಲಾಧಿಕಾರಿ, ಡಿಡಿಪಿಐ ಅವರ ಆದೇಶದಂತೆ ಮಾಲತಿ ವಿ. ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ದೂರು ನೀಡಿದ್ದಾರೆ.