ಓದಿನಲ್ಲಿ ಅಶಿಸ್ತು, ಕಳಪೆ ಪ್ರದರ್ಶನ; ವಿದ್ಯಾರ್ಥಿಗಳ ನಡೆಯಿಂದ ಬೇಸತ್ತು ಶಿಕ್ಷೆ ಕೊಟ್ಟುಕೊಂಡ ಪ್ರಾಂಶುಪಾಲ

Principal Situp
Published on

ಅಮರಾವತಿ: ಸಾಮಾನ್ಯವಾಗಿ ನಾವು ನೋಡಿರುವಂತೆ ವಿದ್ಯಾರ್ಥಿಗಳು ಸರಿಯಾಗಿ ಕಲಿಯದಿದ್ದರೆ ಅಥವಾ ತಪ್ಪು ದಾರಿ ಹಿಡಿದಿದ್ದರೆ ಅಂತಹವರ ಕಿವಿ ಹಿಂಡಿ ಶಿಕ್ಷಕರು ಸರಿದಾರಿಗೆ ತರುತ್ತಾರೆ. ಆದರೆ, ಪ್ರಾಂಶುಪಾಲರೊಬ್ಬರು (HeadMaster) ವಿದ್ಯಾರ್ಥಿಗಳ ನಡೆಗೆ ಬೇಸತ್ತು ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡಿರುವಂತಹ ಘಟನೆ ನಡೆದಿದ್ದು, ಸದ್ಯ ಈ ಘಟನೆ ವೈರಲ್ ಆಗಿದೆ.

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಪೆಂಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಪ್ರಾಂಶುಪಾಲರು (HeadMaster) ವಿದ್ಯಾರ್ಥಿಗಳ ನಡೆಗೆ ಬೇಸತ್ತು ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡಿದ್ದಾರೆ. ಶಾಲೆಯ ಆವರಣದಲ್ಲಿ 50 ಬಸ್ಕಿಯನ್ನು ಹೊಡೆಯುವ ಮೂಲಕ ಪ್ರಾಂಶುಪಾಲರು ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡಿದ್ದು, 2.3 ನಿಮಿಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಶಾಲೆಯ ಪ್ರಾಂಶುಪಾಲ (HeadMaster) ಚಿಂತಾ ರಮಣ ಅವರು ಮೊದಲಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದ್ದು, ಬಳಿಕ ನಾನು ನಿಮ್ಮನ್ನು ಬೈಯ್ಯುತ್ತಿಲ್ಲ, ನಮ್ಮ ಕೈಗಳನ್ನು ಕಟ್ಟಿಹಾಕಿಕೊಂಡಿದ್ದೇವೆ, ನಾವು ಎಷ್ಟೆಲ್ಲಾ ಪ್ರಯತ್ನ ಮಾಡಿದರೂ ನಡವಳಿಕೆ, ಶಿಕ್ಷಣಿಕ, ಬರವಣಿಗೆ ಅಥವಾ ಓದಿನಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಪೋಕಷರು ನಿಮ್ಮ ಮಕ್ಕಳ ಮೇಲೆ ನಿಗಾ ಇಡಿ ಎಂದು ಹೇಳಿ 50 ಬಸ್ಕಿಯನ್ನು ಹೊಡೆದಿದ್ದಾರೆ. 

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವರು ವಿದ್ಯಾರ್ಥಿಗಳ ನಡೆಯನ್ನು ಖಂಡಿಸಿದರೆ ಮತ್ತಷ್ಟು ಜನ ಶಿಕ್ಷಕರ ಅಸಹಾಯಕತೆಯನ್ನು ಕಂಡು ಬೇಸರ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net