ಧೋನಿ, ರೋಹಿತ್​, ಗಂಗೂಲಿ, ಕೊಹ್ಲಿ ಅಲ್ಲವೇ ಅಲ್ಲ... ದ್ರಾವಿಡ್​ ಪ್ರಕಾರ ಟೀಮ್​ ಇಂಡಿಯಾದ ಬೆಸ್ಟ್​ ಕ್ಯಾಪ್ಟನ್​ ಇವರೇ..! Rahul Dravid

Rahul Dravid
Published on

Rahul Dravid : ರಾಹುಲ್​ ದ್ರಾವಿಡ್ ಟೀಮ್ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಅನ್ನೋದರಲ್ಲಿ ಸಂದೇಹವೇ ಇಲ್ಲ. ಕರ್ನಾಟಕ ಪರ ದೇಶೀಯ ಕ್ರಿಕೆಟ್ ಆಡಿದ ದ್ರಾವಿಡ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮದೇಯಾದ ತಂತ್ರಗಳಿಂದ ಎದುರಾಳಿ ತಂಡದ ಬೌಲರ್‌ಗಳನ್ನು ನಿರಾಶೆಗೊಳಿಸುವಲ್ಲಿ ನಿಪುಣರು. ಟೆಸ್ಟ್‌ನಲ್ಲಿ ದೀರ್ಘ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ತಂಡಕ್ಕೆ ಲಾಭ ತಂದುಕೊಟ್ಟ ದ್ರಾವಿಡ್ ಅವರನ್ನು 'ದಿ ವಾಲ್' ಎಂದು ಕರೆಯಲಾಗುತ್ತದೆ.

1996 ರಿಂದ 2012 ರವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ಇತರರ ನಾಯಕತ್ವದಲ್ಲಿ ಆಡಿದ್ದರು. 2005 ಮತ್ತು 2007ರ ನಡುವೆ ಸ್ವತಃ ಅವರೇ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ದ್ರಾವಿಡ್​ ಅವರು ಟೀಮ್​ ಇಂಡಿಯಾ ಮಾಜಿ ಆಟಗಾರ ರವಿಚಂದ್ರನ್​ ಅಶ್ವಿನ್​ ಅವರ ಪಾಡ್​ಕಾಸ್ಟ್​ನಲ್ಲಿ ಭಾಗವಹಿಸಿ ತಮ್ಮ ಕ್ರಿಕೆಟ್​ ವೃತ್ತಿ ಜೀವನದ ಅನೇಕ ವಿಚಾರಗಳ ಬಗ್ಗೆ ಮಾತನಾಡಿರು. ಇದೇ ಸಂದರ್ಶನದಲ್ಲಿ ದ್ರಾವಿಡ್​ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ, ನಿಮ್ಮ ಮೇಲೆ ಪ್ರಭಾವ ಬೀರಿದ ಟೀಮ್​ ಇಂಡಿಯಾ ನಾಯಕ ಯಾರು? ಎಂಬ ಪ್ರಶ್ನೆಯನ್ನು ಅಶ್ವಿನ್​ ಕೇಳಿದರು. ಇದಕ್ಕೆ ಉತ್ತರ ನೀಡಿದ ರಾಹುಲ್​, ವಕ್ಕಡೈ ಬಿಕ್ಷೇಶ್ವರನ್ ಚಂದ್ರಶೇಖರನ್ ನಾಯಕತ್ವದಲ್ಲಿ ಕ್ರಿಕೆಟ್ ಆಡುವುದನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ ಎಂದರು.

ವಿಬಿ ನನಗೆ ಇಷ್ಟವಾದ ನಾಯಕ

ನಾನು ಬಾಲ್ಯದಲ್ಲಿ ತಮಿಳುನಾಡಿನಲ್ಲಿ ಅವರ ಮಾರ್ಗದರ್ಶನದಲ್ಲಿ ಲೀಗ್ ಕ್ರಿಕೆಟ್ ಆಡಿದ್ದೆ. ಅವರು ಗೆಲುವಿಗಾಗಿ ಶ್ರಮಿಸುವ ರೀತಿ ಮತ್ತು ಸ್ಪರ್ಧಾತ್ಮಕ ರೀತಿಯಲ್ಲಿ ಮುಂದುವರಿಯುವ ರೀತಿ ನನಗೆ ನಿಜವಾಗಿಯೂ ಇಷ್ಟವಾಯಿತು. ನನ್ನ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ವಿಬಿ ನನಗೆ ಇಷ್ಟವಾದ ನಾಯಕರಲ್ಲಿ ಒಬ್ಬರು ಎಂದು ದ್ರಾವಿಡ್ ಹೇಳಿದರು.

ನಾಯಕತ್ವ ವಹಿಸುವುದು ಸುಲಭವಲ್ಲ

ಟೀಮ್ ಇಂಡಿಯಾದ ಮಾಜಿ ನಾಯಕರ ಬಗ್ಗೆ ಪ್ರಸ್ತಾಪಿಸಿದಾಗ, ಧೋನಿ ಒಬ್ಬ ಉತ್ತಮ ನಾಯಕ ಎಂದು ದ್ರಾವಿಡ್ ಹೇಳಿದರು. ತಂಡದ ಪರಿವರ್ತನೆಯ ಸಮಯದಲ್ಲಿ ಧೋನಿ ಅವರು ತಂಡವನ್ನು ಮುನ್ನಡೆಸಿದ ರೀತಿ ಶ್ಲಾಘನೀಯ. ಯುವ ಆಟಗಾರನಿಂದ ಹಿರಿಯರಿರುವ ತಂಡಕ್ಕೆ ನಾಯಕತ್ವ ವಹಿಸುವುದು ಸುಲಭವಲ್ಲ ಎನ್ನುವ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರನ್ನು ದ್ರಾವಿಡ್​ ಹೊಗಳಿದರು. ಅಂದಹಾಗೆ, ಧೋನಿ ಅವರು 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯ ರೂಪದಲ್ಲಿ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದು ಇದೇ ಸಮಯಲ್ಲಿ ನೆನಪಿಸಿಕೊಳ್ಳಲೇಬೇಕು.

ಗಂಗೂಲಿ ಶೈಲಿಯೇ ಬೇರೆ, ಕುಂಬ್ಳೆ ಕೂಲ್

ಇನ್ನಿತರ ನಾಯಕರ ಬಗ್ಗೆ ಮಾತನಾಡಿದ ದ್ರಾವಿಡ್​, ಗಂಗೂಲಿ ತಮ್ಮದೇ ಆದ ಶೈಲಿಯಲ್ಲಿ ತಂಡವನ್ನು ಮುನ್ನಡೆಸುವ ನಾಯಕ. ಗೆಲ್ಲಲು ಯಾವುದೇ ಹಂತಕ್ಕೂ ಹೋಗುತ್ತಾರೆ. ಅದೇ ರೀತಿ ಅನಿಲ್ ಕುಂಬ್ಳೆ ಕೂಡ ಉತ್ತಮ ನಾಯಕ. ಆಟಗಾರರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಅವರು ತಮ್ಮ ಮನಸ್ಸಿನಲ್ಲಿರುವುದನ್ನು ವಿವರಿಸುತ್ತಾರೆ ಎಂದರು.

ಅಂದಹಾಗೆ, ಮಧ್ಯಪ್ರದೇಶದಲ್ಲಿ ಜನಿಸಿದ ರಾಹುಲ್ ದ್ರಾವಿಡ್, ತಮ್ಮ ತಂದೆಯ ಕೆಲಸದ ಕಾರಣದಿಂದಾಗಿ ಕರ್ನಾಟಕಕ್ಕೆ ಬಂದು ಅಲ್ಲಿಯೇ ನೆಲೆಸಿದರು. ಈ ಬಲಗೈ ಬ್ಯಾಟ್ಸ್‌ಮನ್ 164 ಟೆಸ್ಟ್‌ಗಳಲ್ಲಿ 13288 ರನ್, 344 ಏಕದಿನಗಳಲ್ಲಿ 10889 ರನ್ ಮತ್ತು ಒಂದು ಟಿ20 ಪಂದ್ಯದಲ್ಲಿ 31 ರನ್ ಗಳಿಸಿದ್ದಾರೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದ ದ್ರಾವಿಡ್, 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ತಮ್ಮ ಹುದ್ದೆಯಿಂದ ಕೆಳಗಿಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net