ಕೊಹ್ಲಿ​, ಬಾಬರ್​ಗಿಂತ ಒಂದು ಹೆಜ್ಜೆ ಮುಂದಿದ್ದಾರೆ! ಇವರೇ ವಿಶ್ವದ ಶ್ರೇಷ್ಠ ಬ್ಯಾಟರ್​: ಅಬ್ದುಲ್​ ರೌಫ್​ ಖಾನ್​ | Champions Trophy

ವಿಜಯವಾಣಿ - 2025-02-18T163616.088
Published on

Champions Trophy: ನಾಳೆಯಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಶುರುವಾಗಲಿದ್ದು, ಕ್ರಿಕೆಟ್ ಪ್ರಿಯರಿಗೆ ಭರಪೂರ ಮನರಂಜನೆ ದೊರಯಲಿದೆ. ಶುಭಾರಂಭ ಪಂದ್ಯವನ್ನು ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಆಡಲಿದೆ. ಬಹುನಿರೀಕ್ಷಿತ ಕ್ರಿಕೆಟ್ ಕಾಳಗಕ್ಕೆ ಅಭಿಮಾನಿಗಳ ಕಾತರ ಹೆಚ್ಚಿದ್ದು, ಎಲ್ಲರ ಚಿತ್ತ ಫೆ.23ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೇಲಿದೆ. ಈ ಮ್ಯಾಚ್​ನಲ್ಲಿ ಪಾಕಿಸ್ತಾನವನ್ನು ಭಾರತ ಬಗ್ಗುಬಡಿಯಲಿದೆ ಎಂದೇ ಭಾರತೀಯ ಕ್ರಿಕೆಟ್ ಪ್ರಿಯರು ಆಶಿಸಿದ್ದಾರೆ. ಸದ್ಯ ಇದೊಂದು ಪಂದ್ಯಕ್ಕೆ ಈಗಾಗಲೇ ಭಾರೀ ಕುತೂಹಲ ಕೆರಳಿದ್ದು, ಪಂದ್ಯದ ಟಿಕೆಟ್​ಗಳು ದಾಖಲೆ ಮೊತ್ತಕ್ಕೆ ಖರೀದಿಯಾಗಿವೆ.

ಅಧಿಕೃತವಾಗಿ ನಾಳೆಯಿಂದ ಚಾಂಪಿಯನ್ಸ್ ಟ್ರೋಫಿ ಶುರುವಾಗುವುದೇ ಆದರೂ ಕ್ರಿಕೆಟ್ ಪ್ರಿಯರಿಗೆ ಮಾತ್ರ ಪಾಕಿಸ್ತಾನ ಮತ್ತು ಭಾರತ ನಡುವಿನ ಹೈವೋಲ್ಟೇಜ್​ ಪಂದ್ಯವೇ ಮೊದಲ ಪಂದ್ಯ ಎನ್ನುವಂತಾಗಿದೆ. ಇದಕ್ಕೆ ಕಾರಣ ಎರಡು ತಂಡಗಳ ನಡುವಿನ ಭಾರೀ ಪೈಪೋಟಿ. ರೋಹಿತ್ ಶರ್ಮ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಅಖಾಡಕ್ಕಿಳಿಯಲಿರುವ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಅವರ ಉಪಸ್ಥಿತಿಯೂ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿವೆ. ಪಾಕ್​ ಮತ್ತು ಭಾರತ ನಡುವಿನ ಬಹುನಿರೀಕ್ಷಿತ ಮ್ಯಾಚ್ ಬೆನ್ನಲ್ಲೇ ರೋಹಿತ್ ಶರ್ಮ ಬಗ್ಗೆ ಪಾಕ್ ಮಾಜಿ ಬೌಲರ್​ ತಮ್ಮ ಅನಿಸಿಕೆ ಹೊರಹಾಕಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಬಾಬರ್​ ಆಜಮ್​ರಂತಹ ಸ್ಟಾರ್​ ಬ್ಯಾಟರ್​ಗಳನ್ನು ಪರಿಗಣಿಸಿ ಮಾತನಾಡಿರುವ ಅಬ್ದುಲ್​ ರೌಫ್​ ಖಾನ್​, "ಕೊಹ್ಲಿ ಮತ್ತು ಬಾಬರ್ ಉತ್ತಮ ಆಟಗಾರರು. ವಿರಾಟ್ ಒಬ್ಬ ಕ್ಲಾಸ್ ಬ್ಯಾಟ್ಸ್‌ಮನ್. ಅವರಿಗೆ ಯಾವುದೇ ಹೋಲಿಕೆ ಇಲ್ಲ. ಬಾಬರ್ ಫಾರ್ಮ್‌ನಲ್ಲಿರುವಾಗ ಅಸಾಧಾರಣ ಬ್ಯಾಟರ್​. ಅದರ ಬಗ್ಗೆಯೂ ಅನುಮಾನವಿಲ್ಲ. ಆದರೆ, ಇವರಿಬ್ಬರಿಗಿಂತ ನನ್ನ ನೆಚ್ಚಿನ ಆಟಗಾರ ರೋಹಿತ್ ಶರ್ಮ. ವಿಶ್ವದ ಅತ್ಯುತ್ತಮ ಹಾಗೂ ಶ್ರೇಷ್ಠ ಬ್ಯಾಟ್ಸ್‌ಮನ್ ಇವರೇ" ಎಂದರು.

"ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್‌ಗಿಂತ ರೋಹಿತ್​ ಒಂದು ಹೆಜ್ಜೆ ಬಹಳ ಮುಂದಿದ್ದಾರೆ. ಇನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪರ ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಟ ಪ್ರದರ್ಶಿಸುವ ಸಾಧ್ಯತೆ ಇದ್ದರೆ, ಪಾಕ್​ ತಂಡದಿಂದ ಮೊಹಮ್ಮದ್​ ರಿಜ್ವಾನ್​ ಮತ್ತು ನಜೀರ್​ ಶಾಹಾ" ಎಂದು ರೌಫ್​ ಹೇಳಿದರು. "ಪಾಂಡ್ಯ ತನ್ನ ತಂಡಕ್ಕೆ ಬ್ಯಾಟಿಂಗ್​ ಮತ್ತು ಬೌಲಿಂಗ್​ನಿಂದ ಅತ್ಯುತ್ತಮ ಕೊಡುಗೆ ನೀಡಬಲ್ಲರು" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net