

ಬೆಂಗಳೂರು: ರಾಜ್ಯದ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ಯಾವ ಆಧಾರದ ಮೇಲೆ ನೀರು ಹರಿಸಿದ್ದೀರಾ. ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದ ತಕ್ಷಣ ಹೆದರಿ ನೀರು ಬಿಟ್ಟಿದ್ದೇಕೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಮ್ಮ ನೀರು ನಮ್ಮ ಹಕ್ಕು ಎಂದು ಜಾಗಟೆ ಹೊಡೆದುಕೊಂಡು ಪಾದಯಾತ್ರೆ ನಡೆಸಿ ಗೋಡೆಗಳ ಮೇಲೆ ಘೋಷವಾಕ್ಯಗಳನ್ನು ಬರೆಸಿಕೊಂಡವರು ಯಾವ ಆಧಾರದ ಮೇಲೆ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಪರೋಕ್ಷವಾಗಿ ಜಲಸಂಪನ್ಮೂಲ ಸಚಿವರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರೇಳದೆ ಚಾಟಿ ಬೀಸಿದ್ದಾರೆ.
ನೀರಿನ ಹಕ್ಕು ಪ್ರತಿಪಾದಿಸಲು ಹೊರಟವರು ರಾಜ್ಯದ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ಯಾವ ಆಧಾರದ ಮೇಲೆ ನೀರು ಹರಿಸಿದ್ದಾರೆ. ತಮಿಳುನಾಡು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದ ತಕ್ಷಣ ಇವರು ಹೆದರಿಕೊಂಡು ಆಕ್ಷೇಪವನ್ನು ಸಲ್ಲಿಸದೆ ನೀರು ಹರಿಸಿದ್ದಾರೆ. ರಾಜ್ಯದಲ್ಲಿರುವ ಜಲ ಸಂಕಷ್ಟದ ಕುರಿತು ಇವರು ನ್ಯಾಯಾಲಯಕ್ಕೆ ಯಾಕೆ ವಿವರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸಿದ ವಿಚಾರದ ತಿಳಿದ ಕೂಡಲೇ ನಾನು ವಿರೋಧ ವ್ಯಕ್ತಪಡಿಸಿ ಸರ್ವಪಕ್ಷ ಸಭೆ ಕರೆಯುವಂತೆ ಆಗ್ರಹಿಸಿದೆ. ಆದರೆ, ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ವಪಕ್ಷ ಸಭೆ ಕರೆದು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕುವ ಬಗ್ಗೆ ತೀರ್ಮಾನಿಸಲಾಗಿದೆ. ನೀರು ಬಿಡುವುದಕ್ಕೂ ಮೊದಲೇ ಇದನ್ನು ಮಾಡಿದ್ದರೆ ಜಲ ಸಮಕಷ್ಟ ಎದುರಾಗುತ್ತಿರಲಿಲ್ಲ. ಕಾಂಗ್ರೆಸ್ನವರಿಂದ ರಾಜ್ಯದ ನೀರಿನ ಹಕ್ಕು ರಕ್ಷಣೆ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.