

ಬೆಂಗಳೂರು: ಎಚ್.ಡಿ.ದೇವೇಗೌಡ ಅವರು, ರಾಜಕೀಯ ಕ್ಷೇತ್ರದಲ್ಲಿ ಸದಾ ಮಿನುಗುವ ನಕ್ಷತ್ರ ಎಂದು ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದ್ದಾರೆ.
ಎಚ್.ಡಿ.ದೇವೇಗೌಡ ಅಭಿನಂದನಾ ಸಮಿತಿ, ಭಾನುವಾರ ಬಾಬು ಜಗಜೀವನ್ರಾಮ್ ಭವನದಲ್ಲಿ ಆಯೋಜಿಸಲಾಗಿದ್ದ "ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ ಪ್ರಶಸ್ತಿ' ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿಎಂ ಮತ್ತು ಪಿಎಂ ಆಗಿ ಮುಂದುವರಿಯಲು ಎಲ್ಲ ಅವಕಾಶ ಇತ್ತು. ಆದರೆ, ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಕಡಿಮೆ ಅವಧಿಯಲ್ಲಿ ಪ್ರಧಾನಿ ಮಂತ್ರಿಯಾಗಿದ್ದರೂ ಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಮಾಡಿದ್ದಾರೆ. ಬದುಕಿನಲ್ಲಿ ಅತ್ಯುತ್ತಮ ಸಂಸ್ಕಾರವನ್ನು ಬೆಳೆಸಿಕೊಂಡಿದ್ದಾರೆ. ಭಕ್ತಿ, ಶ್ರದ್ಧೆ ಮತ್ತು ನಿಷ್ಠೆ ಅಳವಡಿಸಿಕೊಂಡು ಬಂದ ಅಪರೂಪದ ರಾಜಕಾರಣಿ. ಅವರಿಗೆ ಗಟ್ಟಿ ನೆಲೆಯನ್ನು ಒದಗಿಸಿ ಕೊಟ್ಟಿದ್ದು ವಿರೋಧಪಕ್ಷ ನಾಯಕ ಸ್ಥಾನ.ಯಾವುದೇ ಅಭ್ಯಾಸ ಇಲ್ಲದ ಒಬ್ಬನೇ ಒಬ್ಬ ರಾಜಕಾರಣಿ. ನೀರಾವರಿ ಸೇರಿ ಎಲ್ಲ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದವರು ಎಂದರು.
ರಾಜಕೀಯ,ಶ್ರೀಮಂತಿಕೆ ಹಿನ್ನೆಲೆಯಲ್ಲಿ ಹುಟ್ಟಿದವರಲ್ಲ. ರೈತರ ಕುಟುಂಬದಲ್ಲಿ ಹುಟ್ಟಿ ಇಂಜಿನಿಯರ್, ಗುತ್ತಿಗೆದಾರರಾಗಿ, ವಿರೋಧಪಕ್ಷದ ನಾಯಕ, ಸಿಎಂ ಮತ್ತು ಪ್ರಧಾನಿ ಮಂತ್ರಿಯಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಹಲವು ಏಳು-ಬೀಳು ಕಂಡಿದ್ದರೂ ಎಲ್ಲವನ್ನೂ ಸಮಾನ ದೃಷ್ಟಿಯಿಂದ ನೋಡಿದವರು. ಸರಳ ಜೀವನ, ಉದಾರ ಚಿಂತನೆಗಳನ್ನು ಆಲೋಚಿಸಿದವರು. ರೈತರ ಮತ್ತು ದೇಶದ ಪರವಾಗಿ ಚಿಂತಿಸಿದವರು. ಅವರು ದೂರದೃಷ್ಟಿವುಳ್ಳವರು ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರ ಬಗ್ಗೆ ಅಪಾರ ಕಾಳಿಜಿ
ಕನ್ನಡಿಗರ ಹೃದಯಲ್ಲಿ ಅಚ್ಚಹಳಿಯದೆ ಶಾಶ್ವತವಾಗಿ ಉಳಿದಿರುವ ಏಕೈಕ ವ್ಯಕ್ತಿ ದೇವೇಗೌಡ, ದೇಶದ ಪ್ರಧಾನಿ ಮಂತ್ರಿಯಾಗಿದ್ದು ನಮಗೆಲ್ಲಾ ಹೆಮ್ಮಯ ಸಂಗತಿ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಪಾಲಕರ ಪಾತ್ರ ಮುಖ್ಯವಾದದ್ದು. ಅದರಂತೆ, ಅವರು ಎತ್ತರಕ್ಕೆ ಬೆಳೆಯಲು ಪಾಲಕರು, ಪತ್ನಿಯೇ ಕಾರಣ. ಅವರ ರಾಜಕೀಯ ಜೀವನ ಆಶ್ವಯಪಡುವಂತಹ ರೀತಿಯಲ್ಲಿದೆ. ಇಡೀ ಜೀವನವನ್ನು ಸಮಾಜದ ಉದ್ದಾರಕ್ಕೆ ಅರ್ಪಣೆ ಮಾಡಿದ್ದಾರೆ.ರೈತರ ಬಗ್ಗೆ ಅಪಾರ ಕಾಳಿಜಿ ಇಟ್ಟುಕೊಂಡಿದ್ದಾರೆ ಎಂದು ಸಿದ್ಧಗಂಗಾ ಮಠದ ಪೀಠಾಧ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪ್ರಶಸ್ತಿ ಪ್ರದಾನ: "ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ ಪ್ರಶಸ್ತಿ'ಯನ್ನು ಎಚ್.ಡಿ.ದೇವೇಗೌಡರಿ ಅವರಿಗೆ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 93 ಸಾಧಕರಿಗೆ ಎಚ್ಡಿಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು."ದೇವೇಗೌಡರ ಬದುಕು ಮತ್ತು ಸಾಧನೆ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ. ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ,ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸಾವಿರಾರು ಮಂದಿ ಉಪಸ್ಥಿತರಿದ್ದರು. ಇದೇ ವೇಳೆ "ದೇವೇಗೌಡ ಅವರಿಗೆ "ಭಾರತ ರತ್ನ' ನೀಡಬೇಕೆಂದು ಅಭಿಮಾನಿಗಳು ಒತ್ತಾಯಿಸಿದರು.