

ಹಾಸನ: "ಕಚೇರಿಯಲ್ಲಿ ಇನ್ಮುಂದೆ ಏಜೆಂಟರು ಕಾಣಿಸಿಕೊಂಡರೆ ಜನರಿಗೆ ಹೇಳಿ ಓಡಾಡಿಸಿಕೊಂಡು ಹೊಡೆಸುತ್ತೇನೆ, ನನ್ನ ಮೇಲೆ ಯಾರು ಎಫ್ಐಆರ್ ಹಾಕಿಸುತ್ತಾರೋ ಹಾಕಲಿ, ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ...' ಹೀಗೆಂದು ಎಚ್ಚರಿಕೆ ನೀಡಿದ್ದು ಮಾಜಿ ಸಚಿವ ಎಚ್.ಡಿ. ರೇವಣ್ಣ.
ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ರೇವಣ್ಣ, ಒಂದು ವರ್ಷದಿಂದ ಇಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನೋಂದಣಿಗೆ ಇಂತಿಷ್ಟು ಅಂಥ ಲಂಚದ ಬೇಡಿಕೆ ಇಡುತ್ತಿದ್ದಾರೆ. 10 ಲಕ್ಷ ರೂ. ಆಸ್ತಿ ನೋಂದಣಿಗೆ 10 ಸಾವಿರ ರೂ., 20 ಲಕ್ಷಕ್ಕೆ 20 ಸಾವಿರ ರೂ. ನೀಡಲೇಬೇಕಿದೆ. ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷ ರೂ. ಕೊಡಲೇಬೇಕೆಂದು ಹೇಳುತ್ತೀರಿ. ಹಾಗಾದರೆ, ಯಾರಿಗೆ ಕೊಡುತ್ತೀರಿ? ಅಷ್ಟೊಂದು ದುಡ್ಡನ್ನು, ಸರ್ಕಾರಕ್ಕೆ ಪಾವತಿಸುತ್ತಿದ್ದೀರಾ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಏಪ್ರಿಲ್ನಿಂದ ಹಿರಿತನ ಆಧರಿಸಿ ಆನ್ಲೈನ್ ಮೂಲಕ ನೋಂದಣಿ ಮಾಡಲಾಗುತ್ತಿದೆ. ನಿತ್ಯ 70 ಕಡತಗಳು ವಿಲೇವಾರಿಯಾಗುತ್ತಿವೆ. ಆದರೆ,
ಏಜೆಂಟ್ ಇಟ್ಟುಕೊಂಡು ಕೆಲಸ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆಯೇ? ಯಾವನು ಇಲ್ಲಿ ಕೂತುಕೊಳ್ಳುವವನು? ಇಲ್ಲಿ ತಿಂಗಳ ಕಲೆಕ್ಷನ್ ಅಂತೆ ಅವನದ್ದು. ಬಡ ಬಗ್ಗರು ಏನಾಗಬೇಕು? ಈ ದಿನದ ಫೈಲ್ಗಳನ್ನು ತೋರಿಸಿ, ನಿಮ್ಮ ಡ್ರಾವರ್ ಎಲ್ಲ ತೆಗೆಯಿರಿ, ಎಷ್ಟು ಹಣ ಇದೆ ನೋಡೋಣ ಎಂದು ಗುಡುಗಿದರು.
ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಚೇರಿಯ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದರು. ಉಪ ನೋಂದಣಾಧಿಕಾರಿ ಮಧು ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲಿದ್ದರು.